ಉಡುಪಿ: ತನ್ನದಲ್ಲದ ತಪ್ಪಿಗಾಗಿ ಪಿಂಚಣಿ ಕಡಿತದ ಶಿಕ್ಷೆಗೊಳಗಾದ ಬಡ ವೃದ್ಧ ಮಹಿಳೆಗೆ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯವು ರಕ್ಷಣೆ ನೀಡಿ, ಪರಿಹಾರ ನೀಡುವಂತೆ ಸೂಚಿಸಿದರೂ, ಇಪಿಎಫ್ ಪರಿಹಾರ ನೀಡದೇ ಸತಾಯಿಸುತ್ತಿದೆ.
ಈ ಬಗ್ಗೆ ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ,ಹೆಜಮಾಡಿಯ ಗೀತಾ ಕಾಂಚನ್ 17 ವರ್ಷ ಮಹಾಲಕ್ಷ್ಮಿ ಬ್ಯಾಂಕಿನ ಹೆಜಮಾಡಿ ಶಾಖೆಯಲ್ಲಿ ಸೇವೆ ಸಲ್ಲಿಸಿ 2014ರಲ್ಲಿ ನಿವೃತ್ತಿಯಾದರು. ಸೇವಾವಧಿಯುದ್ದಕ್ಕೂ ಬ್ಯಾಂಕಿನವರು ಪ್ರಾವಿಡೆಂಟ್ ಫಂಡ್ ಕಡಿತಗೊಳಿಸುತ್ತಿದ್ದರು. ನಿವೃತ್ತಿಯ ನಂತರ 1756 ರೂ. ಪಿಂಚಣಿ ಸಿಗುತ್ತಿತ್ತು.
2020ರ ಸೆಪ್ಟೆಂಬರ್‌ನಲ್ಲಿ, ಉಡುಪಿಯ ಪಿಎಫ್ ರೀಜನಲ್ ಕಚೇರಿಯಿಂದ, ಮಾಸಿಕ ಪಿಂಚಣಿಯಲ್ಲಿ 500 ರೂ. ಕಡಿತಗೊಳಿಸಲಾಗಿದೆ ಅಂತ ಸೂಚನೆ ನೀಡಲಾಗಿತ್ತು. ಆರು ವರ್ಷ 500 ರೂ. ಅಧಿಕ ಪಿಂಚಣಿ ನೀಡಿದ್ರಿಂದ, ಪಾವತಿಸಿರುವ ಅಧಿಕ ಹಣ 50,147ರೂ.ಗಳನ್ನು ಡ್ರಾಫ್ಟ್ ಮೂಲಕ ಹಿಂದಿರುಗಿಸುವಂತೆ ಸೂಚಿಸಲಾಗಿತ್ತು.
ಮಹಿಳೆ ಈ ಅನ್ಯಾಯದ ಕುರಿತು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಅನ್ಯಾಯದ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಾಗಿ, ಒಂಬತ್ತು ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ಮಹಿಳೆಗೆ 1,756 ರೂ. ಮಾಸಿಕ ಪಿಂಚಣಿ ಮುಂದುವರಿಸಬೇಕು ಎಂದು ಇಪಿಎಫ್ ಗೆ ಆದೇಶಿಸಿದೆ.
ಕಡಿತಗೊಳಿಸಿದ್ದ 500 ರೂ. ಮಾಸಿಕ ಪಿಂಚಣಿ ಬಾಕಿ ಆಕೆಗೆ ಪಾವತಿಸಬೇಕು ಹಾಗೂ ಹೆಚ್ಚುವರಿಯಾಗಿ ಪಾವತಿಸಿದೆ ಎನ್ನಲಾದ 50,147 ರೂ. ಮೊತ್ತವನ್ನು ಆಕೆಯಿಂದ ವಸೂಲಿ ಮಾಡುವ ಪ್ರಕ್ರಿಯೆ ನಿಲ್ಲಿಸಬೇಕು. ಗೀತಾ ಕಾಂಚನ್‌ರಿಗೆ ಪರಿಹಾರವಾಗಿ 25,000 ರೂ. ಹಾಗೂ ದಾವೆಗಾಗಿ ವ್ಯಯಿಸಿದ 10,000 ರೂ.ಗಳನ್ನು ಒಂದು ತಿಂಗಳೊಳಗಾಗಿ ನೀಡಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ. ಆದೇಶವಾಗಿ ಒಂದು ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ಹೀಗಾಗಿ ನಾಲ್ಕು ದಿನಗಳವರೆಗೆ ನೋಡುತ್ತೇವೆ, ಪರಿಹಾರ ಕೊಡದೇ ಇದ್ದರೆ ನ್ಯಾಯಾಂಗ ನಿಂದನೆ ದಾವೆ ಹೂಡಲಾಗುವುದು ಎಂದು ಪ್ರತಿಷ್ಠಾನ ಎಚ್ಚರಿಸಿದೆ.
PublicNext
28/08/2022 08:31 am