ತನ್ನ ಮೇಲೆ ತಲವಾರು ದಾಳಿಗೆ ಯತ್ನಿಸಲಾಗಿದೆ ಎಂದು ವ್ಯಕ್ತಿಯೋರ್ವರು ವದಂತಿ ಹಬ್ಬಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದ್ದು, ಇದೀಗ ವದಂತಿ ಹಬ್ಬಿಸಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಉಚ್ಚಿಲ ಜಾಲುಹಿತ್ತಿಲು ನಿವಾಸಿ ಕಿಶೋರ್(45) ವದಂತಿ ಹಬ್ಬಿಸಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಶೋರ್ ಇಂದು ಬೆಳಗ್ಗೆ 7.30 ಸುಮಾರಿಗೆ ಕೆ.ಸಿ.ನಗರ ಮುಳ್ಳುಗುಡ್ಡೆ ಎಂಬಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಯಾರೋ ತನ್ನನ್ನು ಬೆನ್ನಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ್ದ. ಈ ಬಗ್ಗೆ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ , 'ತಲವಾರು ದಾಳಿ ಯತ್ನದಂತಹ ಯಾವುದೇ ಘಟನೆ ನಡೆದಿಲ್ಲ. ಈ ಬಗ್ಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವದಂತಿ ಹಬ್ಬಿಸಿರುವ ವ್ಯಕ್ತಿಯನ್ನು ವಿಚಾರಿಸಿದ್ದೇನೆ. ಆತ ತನ್ನ ಮೇಲೆ ಅಟ್ಯಾಕ್ ಆಗುವ ರೀತಿ ಭಾವಿಸಿದ್ದಾಗಿಯೂ ಯಾರೂ ತನ್ನ ಮೇಲೆ ತಲವಾರು ದಾಳಿ ಆಗಿಲ್ಲ, ಯಾರೂ ಬೆನ್ನಟ್ಟಿಲ್ಲ ಎಂದು ಆತ ಒಪ್ಪಿಕೊಂಡಿದ್ದಾನೆ. ವದಂತಿ ಹಬ್ಬಿಸಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಕೊಡದಿರಿ. ಮಾಧ್ಯಮವೂ ಈ ಬಗ್ಗೆ ಪೊಲೀಸ್ ಮಾಹಿತಿ ಪಡೆದೇ ಸುದ್ದಿ ಮಾಡಬೇಕೆಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮನವಿ ಮಾಡಿದ್ದಾರೆ.
PublicNext
03/08/2022 02:08 pm