ಉಡುಪಿ: ಇಂದಿನ ಯುವ ಸಮುದಾಯ ಮಾತೃಭಾಷೆಯನ್ನು ಮರೆತು ಪಾಶ್ಚಾತ್ಯ ಭಾಷೆಗಳಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಖೇದಕರ ಸಂಗತಿಯಾಗಿದ್ದು ಮಾತೃಭಾಷೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವಂತಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಚರ್ಚಿನ ಧರ್ಮಗುರುಗಳಾದ ವಂ|ಸ್ಟ್ಯಾನಿ ಬಿ ಲೋಬೊ ಹೇಳಿದರು.
ಅವರು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ, ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೊಂಕಣಿ ಭಾಷೆ ಅತೀ ಪ್ರಿಯವಾದ ಭಾಷೆಯಾಗಿದ್ದು ಇಂದು ಅದು ಕೇವಲ ಅಲಂಕಾರಿಕ ಭಾಷೆಯಾಗುತ್ತಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಭಾಷೆ ಸೀಮಿತವಾದಂತಿದ್ದು ಯುವ ಸಮುದಾಯ ಈ ಭಾಷೆಯತ್ತ ಅಕರ್ಷಣೆ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಕೊಂಕಣಿ ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರು ತಮ್ಮ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಲೇಖಕರು ಆಗಿರುವ ವಂ|ಚೇತನ್ ಲೋಬೊ ಇವರ ಚೇತನ ಚಿಂತನ ಕೃತಿಗೆ ಈ ಸಾಲಿನ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ|ಜೆರಾಲ್ಡ್ ಪಿಂಟೊ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ನೀಡಿದರು.
ಇದೇ ವೇಳೆ ಡೆನಿಸ್ ಡಿʼಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಮಾಡಲಾಯಿತು. ಆಲ್ಫೋನ್ಸ್ ಡಿʼಕೋಸ್ತಾ ಬಹುಮಾನಿತರ ವಿವರಗಳನ್ನು ನೀಡಿದರು.
Kshetra Samachara
20/09/2021 11:28 am