ಮಂಗಳೂರು: ಮಂಗಳೂರು ನಗರದಲ್ಲಿ ಇಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಡಿರುವ 'ಟಗರು' ಸಿನಿಮಾ ಹಾಡಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಖತ್ ಸ್ಟೆಪ್ ಹಾಕಿದ್ದಾರೆ.
ಮಂಗಳೂರು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ನಡೆದ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿ ಮತ್ತು ಟಗರು ಸಿನಿಮಾ ನಿರ್ಮಾಪಕ ಭಾಗವಹಿಸಿದ್ದರು. ಈ ಸಂದರ್ಭ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು 'ಟಗರು' ಸಿನಿಮಾ ಹಾಡಿಗೆ ಶಿವರಾಜ್ ಕುಮಾರ್ ಅವರು ಸಖತ್ ಸ್ಟೆಪ್ ಹಾಕಿದರು. ಬಳಿಕ ಅಪ್ಪುವಿಗಾಗಿ 'ಬಾನದಾರಿಯಲ್ಲಿ ಸೂರ್ಯ ಜಾರಿ ಬಂದ' ಹಾಡು ಹಾಡಿದರು.
ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಅಪ್ಪು ಬಗ್ಗೆ ಮಾತನಾಡುವಾಗ ಸಂಕಟವಾಗುತ್ತದೆ. ಅವನನ್ನು ಅಗಲಿ ಆರು ತಿಂಗಳಾದರೂ ಇನ್ನು ನೋವು ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಸಣ್ಣವನು ಅವನು. ಹಾಗಾಗಿ ಅವನನ್ನು ಕಳೆದುಕೊಂಡು ಮಾತನಾಡೋದು ಅಷ್ಟು ಸುಲಭವಲ್ಲ. ಅಪ್ಪು ಹುಟ್ಟಿದಾಗಲೇ ಸೂಪರ್ ಸ್ಟಾರ್. ಮಾನವೀಯತೆ ಎಂಬ ಪದಕ್ಕೆ ಆತ ದೊಡ್ಡ ಉದಾಹರಣೆಯಾದ ಎಂದು ಹೇಳಿದರು.
ಮಂಗಳೂರು ಬಗ್ಗೆ ನನಗೆ ಬಹಳಷ್ಟು ಅಭಿಮಾನವಿದೆ. ಅಪ್ಪಾಜಿ ಹೊರತುಪಡಿಸಿ ಮಂಗಳೂರಿನಲ್ಲಿ ಅತೀ ಹೆಚ್ಚು ನಾನು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಅಪ್ಪಾಜಿ ಮಂಗಳೂರಿನಲ್ಲಿ ಮ್ಯೂಸಿಕಲ್ ನೈಟ್‌ನಲ್ಲಿಯೂ ಪಾಲ್ಗೊಂಡಿದ್ದರು. ಆಗ ನಾವೆಲ್ಲರೂ ಮಂಗಳೂರಿಗೆ ಆಗಮಿಸಿದ್ದೆವು. ತುಳು ಬೇರೆಯಲ್ಲ, ಕನ್ನಡ ಬೇರೆಯಲ್ಲ ಎರಡೂ ಒಂದೇ. ನಾವು ಕನ್ನಡ ಸಿನಿಮಾ ನೋಡುತ್ತೇವೆ. ತುಳು ಸಿನಿಮಾವನ್ನೂ ನೋಡುತ್ತೇವೆ. ದ.ಕ.ಜಿಲ್ಲೆಯವರಾದ ಕಾಮತ್ ಎಂಬವರು ಟಾಕೀಸ್ ಎಂಬ ಆ್ಯಪ್ ಅನ್ನು ಕನ್ನಡಕ್ಕೋಸ್ಕರ ಆರಂಭಿಸಿದ್ದಾರೆ. ಅದರಲ್ಲಿ ಕನ್ನಡ ಸಿನಿಮಾ, ತುಳು ಸಿನಿಮಾ ಎರಡೂ ಇದೆ. ನನಗೆ ಮುಂದೆಯೂ ಪೊಲೀಸ್ ಪಾತ್ರದಲ್ಲಿ ಮತ್ತೆ ನಟಿಸುವ ಆಸೆಯಿದೆ. ಟಗರು - 2 ಸಿನಿಮಾ ಮತ್ತೆ ಬರಬಹುದು ಎಂದು ಶಿವರಾಜ್‌ಕುಮಾರ್ ಹೇಳಿದರು.
PublicNext
02/05/2022 07:47 pm