ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಅಟಲ್ ಥಿಂಕರಿಂಗ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳಿಂದ ಮಾಡಲ್ಪಟ್ಟ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.
ಟೆಸ್ಲಾ ಕಾಯಿಲ್ ಬಳಿ ಬಲ್ಬ್‌ಗಳನ್ನು ತಂದರೆ ಅವು ಉರಿಯುತ್ತವೆ. ಸೋಲಾರ್ ಸಿಸ್ಟಮ್‌ನಲ್ಲಿ ಮನೆಯಲ್ಲಿ ಹೀಗೆ ವಿದ್ಯುತ್ ಉತ್ಪಾದಿಸಬಹುದು ಎಂದು ಎಂಟನೆಯ ತರಗತಿ ವಿದ್ಯಾರ್ಥಿ ಪ್ರಜ್ವಲ್ ಪೈ ತಾನೇ ತಯಾರಿಸಿದ ವಿಜ್ಞಾನದ ಮಾದರಿಯನ್ನು ವಿವರಿಸಿದ. ಹುಲ್ಲು ಕತ್ತರಿಸುವ ಯಂತ್ರದ ಪುಟ್ಟ ಮಾದರಿಯನ್ನು ಬ್ಲೇಡ್ ಬಳಸಿ ತಯಾರಿಸಿದ ತೇಜಸ್ವಿ ಮತ್ತು ಕೀರ್ತನ್ ಸಣ್ಣ ಹುಲ್ಲುಗಳನ್ನು ಕತ್ತರಿಸಿ ತೋರಿಸುತ್ತಿದ್ದರು. ಪುಟ್ಟ ಮನೆಯ ಮಾದರಿಯಲ್ಲಿ ಬಾಟಲು ಇಟ್ಟು ಮಳೆಕೊಯ್ಲಿನ ಮಾದರಿಯನ್ನು ತೋರಿಸಿದ ಸ್ಪಂದನಾ, ಶ್ರೇಯಸ್, ರಂಜಿತ್, ಹನಿ ನೀರಾವರಿಯ ಮಾದರಿ ಮಾಡಿದ ಹಾರ‍್ವಿ, ಏರ್ ಕೂಲರ್ ಮಾಡಿದ ದಿಗಂತ್, ವರುಣ್,ವಿದ್ಯುತ್ ವಾಹಕತೆಯನ್ನು ತೋರಿಸಿಕೊಟ್ಟ ಶ್ರಾವ್ಯ ಹೀಗೆ ನಲವತ್ತಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳನ್ನು ಮಾಡಿದ ವಿದ್ಯಾರ್ಥಿಗಳು ಅವುಗಳನ್ನು ವಿವರಿಸಿ ಸಂಭ್ರಮಿಸಿದರು.
ಐದನೇ ತರಗತಿಯ ದಿಶಾ ಮಾಡಿದ ಪೆನ್ ಗನ್, ಪ್ರದೀಪ್, ದಿಶಾಂತ್ ಮಾಡಿದ ಟೇಬಲ್ ಫ್ಯಾನ್, ತ್ರೀಶಾ ಮಾಡಿದ ಮೋಟರ್ ಫ್ಯಾನ್, ಮನೀಶ್‌ನ ಏರ್ ಕೂಲರ್, ಚೇತನ್ ಶ್ರೇಯಸ್ ನಿಶಾಲ್ ಮಾಡಿದ ಪವನ ಯಂತ್ರ, ವಿಘ್ನೇಶ್, ರಿತಿಕ್, ಜೀವನ್, ಮನೀಷ್, ನಿಶ್ಚಲ್ ಮುಂತಾದವರು ಮಾಡಿದ ಸ್ಮಾರ‍್ಟ್ ಸಿಟಿ, ಶೀತಾಂಶು ಮಾಡಿದ ಬ್ಲೂಟೂಥ್‌ನಿಂದ ಬಾಗಿಲನ್ನು ಲಾಕ್ ಮಾಡುವುದು, ಗಣಿತದಲ್ಲಿ ಗುಣಾಕಾರದ ಒಂದು ಕಾರ‍್ಡ್ ಬೋರ್ಡಿನ ಮೂಲಕ ತೋರಿಸುವ ವಿಧಾನ, ರಟ್ಟು ಗಮ್, ಬಾಟಲ್ ಸ್ಟ್ರಾ, ಸಣ್ಣ ಲೋಟಗಳನ್ನು ಬಳಸಿ ಮಾಡಿದ ವಾಟರ್ ಡಿಸ್ಪೆಸರ್, ಬರ್ಡ್ ಶೂಟರ್ ಮೊಬೈಲು ಗೇಮ್ ಹೀಗೆ ವಿವಿಧ ಮಾದರಿಗಳು ಗಮನ ಸೆಳೆದವು.
ಪ್ರೌಢಶಾಲೆ ವಿಭಾಗದಲ್ಲಿ ಸ್ಲೈಯರ್ ಟೆಸ್ಲಾ ಕಾಯಿಲ್ ಮಾಡಿದ ಪ್ರಜ್ವಲ್ ಪೈ ಪ್ರಥಮ, ಜನರು ಝೀಬ್ರಾ ಕ್ರಾಸ್‌ನಲ್ಲಿ ಹೋಗುವಾಗ ವಾಹನಗಳಿಂದ ತೊಂದರೆ ಆಗದಂತೆ ಮಾಡಿದ ರಸ್ತೆ ಮುಚ್ಚುವ ವ್ಯವಸ್ಥೆಯ ಗ್ರೀನ್ ಸಿಗ್ನಲ್ ದಿಗಂತ್, ರೈಲ್ವೇ ಸ್ಟೇಷನ್ನಿನಲ್ಲಿ ರಕ್ಷಣೆಯ ಮಾದರಿ ಮಾಡಿದ ನಿತಿನ್, ಪ್ರಾಥಮಿಕ ಶಾಲಾ ವಿಭಾಗದದಲ್ಲಿ ನೀರಿನ ಶುದ್ದೀಕರಣ ಘಟಕ ಮಾಡಿದ ಸಮೃದ್ಧ್ ಶೆಟ್ಟಿ, ಹುಲ್ಲು ಕತ್ತರಿಸುವ ಯಂತ್ರದ ಮಾದರಿ ಮಾಡಿದ ತೇಜಸ್ವಿ, ಕೀರ್ತನ್, ನೀರಿನ ಪುನರ್ ಬಳಕೆಯ ಮಾದರಿ ಮಾಡಿದ ಚ್ಯವನ್, ಮನ್ವಿತ್, ದೀಕ್ಷಿತ್ ಪ್ರಜ್ವೇಶರ ತಂಡ ಬಹುಮಾನಗಳನ್ನು ಪಡೆದರು.
ಕಟೀಲು ದೇಗುಲದ ಆಡಳಿತ ಮಂಡಳಿಯ ಕೊಡೆತ್ತೂರುಗುತ್ತು ಸನತ್‌ಕುಮಾರ ಶೆಟ್ಟಿ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರಾಂಶುಪಾಲೆ ಕುಸುಮಾವತಿ, ಉಪನ್ಯಾಸಕರಾದ ಕವಿತಾ ಶೆಟ್ಟಿ, ಹರೀಶ್, ಚಂದ್ರಶೇಖರ್, ದೀಕ್ಷಾ, ರಮ್ಯಾ ಮಯ್ಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ನಿವೃತ್ತ ಶಿಕ್ಷಕ ಸುರೇಶ್ ಭಟ್, ಮುಲ್ಕಿ ವಿಜಯಾ ಕಾಲೇಜಿನ ವೆಂಕಟೇಶ ಭಟ್ ತೀರ್ಪುಗಾರರಾಗಿ ಸಹಕರಿಸಿದರು.
Kshetra Samachara
12/08/2022 06:42 pm