ಮೂಡುಬಿದಿರೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯದಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ ಎಲ್ಲಾ 379 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇಕಡಾ ನೂರು ಫಲಿತಾಂಶ ದಾಖಲಿಸಿದ್ದಾರೆ. ಐದು ಮಂದಿ ವಿದ್ಯಾರ್ಥಿಗಳು 625ಕ್ಕೆ 625ಅಂಕ ಪಡೆದುಕೊಂಡಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಓರ್ವ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಇಂದಿರಾ ಅರುಣ್, ಕಲ್ಮೇಶ್ವರ್ ಪುಂಡಲಿಕ್ ನಾಯ್ಕ್, ಸುದೇಶ್ ದತ್ತಾತ್ರೇಯ, ಶ್ರೇಯಾ ಆರ್.ಶೆಟ್ಟಿ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಈರಯ್ಯ ಶ್ರೀಶೈಲ್ 625 ಅಂಕ ಗಳಿಸಿದ ವಿದ್ಯಾರ್ಥಿಗಳು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
41 ವಿದ್ಯಾರ್ಥಿಗಳು 625ರಲ್ಲಿ 620ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದು, 141ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಒಟ್ಟು 274 ವಿದ್ಯಾರ್ಥಿಗಳು 85% ಅಂಕಗಳೊಂದಿಗೆ, ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಆಳ್ವಾಸ್ ಶಾಲೆಯ 5 ವಿದ್ಯಾರ್ಥಿಗಳು 6 ವಿಷಯಗಳಲ್ಲೂ 100ಕ್ಕೆ 100 ಅಂಕ ಪಡೆದರೆ, 15 ವಿದ್ಯಾರ್ಥಿಗಳು 5 ವಿಷಯಗಳಲ್ಲಿ, 28 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 35 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 51 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 56 ವಿದ್ಯಾರ್ಥಿಗಳು 1ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಈ ಸಾಧನೆ ಮೆರೆದ ಆಳ್ವಾಸ್ ಶಾಲೆಗಳ ವಿದ್ಯಾರ್ಥಿಗಳ ಪೈಕಿ, 134 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣವನ್ನು ಪಡೆದಿದ್ದಾರೆ ಎಂದು ಡಾ.ಆಳ್ವ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಬಿ., ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಾ ಟಿ. ಮೂರ್ತಿ, ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಂ ಕುಂದರ್ ಉಪಸ್ಥಿತರಿದ್ದರು.
Kshetra Samachara
19/05/2022 10:47 pm