ಮುಲ್ಕಿ: ಕಟೀಲು ದೇವಳದ ಪದವಿ ಪೂರ್ವ ಕಾಲೇಜಿನ ಕಲಾ (ಬಿಎ ವಿಭಾಗ)ವನ್ನು ಈ ಬಾರಿ ಮುಚ್ಚುವುದರ ಕುರಿತು ಆಕ್ಷೇಪ ಸಲ್ಲಿಸಿ ಕೊಡೆತ್ತೂರು ಮಾಗಣೆಯ ಗ್ರಾಮಸ್ಥರಿಂದ ದೇವಳದ ಆಡಳಿತ ಮಂಡಳಿಯನ್ನು ಆಗ್ರಹ ಪಡಿಸಿ ಅರ್ಜಿಯನ್ನು ಸಲ್ಲಿಸಲಾಯಿತು.
ಕೊಡೆತ್ತೂರು ಮಾಗಣೆಯ ಗ್ರಾಮಸ್ಥ ದೇವಿಪ್ರಸಾದ್ ಶೆಟ್ಟಿ ಮಾಧ್ಯಮದ ಜೊತೆ ಮಾತನಾಡಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನಲ್ಲಿ ಈ ಬಾರಿ ಕಲಾ ವಿಭಾಗವನ್ನು ನಿಲ್ಲಿಸಲು ದೇವಳದ ಆಡಳಿತ ಮಂಡಳಿ ತೀರ್ಮಾನಿಸಿರುವುದು ಒಂದು ದೊಡ್ಡ ತಪ್ಪು ನಡೆಯಾಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ದೇವಳದ ಹಿಂದಿನ ದಕ್ಷ, ಕಟೀಲಿನ ಅಭಿವೃದ್ದಿಯ ಹರಿಕಾರ ವೇದಮೂರ್ತಿ ದಿ. ಗೋಪಾಲಕೃಷ್ಣ ಆಸ್ರಣ್ಣ ಹಾಗೂ ಆಡಳಿತ ಮೊಕ್ತೇಸರ ಕೊಡೆತ್ತೂರು ಗುತ್ತು ಡಾ. ಶಾಂಭ ಶೆಟ್ಟಿಯವರ ಕನಸಿನ ಕೂಸಾಗಿ ಈ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿವೆ ಎಂದರು.
ಆಗಲೂ ಕಟೀಲಿನ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಯ ವಿರುದ್ಧ ಒಂದು ವರ್ಗದ ಸ್ಥಾಪಿತ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸಿವೆ. ಇದೇ ಸ್ಥಾಪಿತ ಹಿತಾಸಕ್ತಿಗಳು ಈ ಬಾರಿ ಕಲಾ ವಿಭಾಗವನ್ನು ನಿಲ್ಲಿಸಲು ಹುನ್ನಾರ ನಡೆಸಿದ್ದು ದೇವಳಕ್ಕೆ ನಷ್ಟ ಮತ್ತು ವಿದ್ಯಾರ್ಥಿಗಳ ಕೊರತೆ ಎಂಬ ನೆಪ ಒಡ್ಡಲಾಗಿದೆ ಎಂದರು.
Kshetra Samachara
01/08/2021 08:23 pm