ಕಾಪು : ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಜೂರು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರ ದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭದ್ರ ಭವಿಷ್ಯಕ್ಕಾಗಿ ಆವರ್ತಿತ ಠೇವಣಿ ಯೋಜನೆಯನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯೊಂದಿಗೆ ಕಾಪು ತಾಲೂಕಿನಲ್ಲೇ ಪ್ರಥಮ ಬಾರಿಗೆ ಕರಂದಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭದ್ರ ಭವಿಷ್ಯಕ್ಕಾಗಿ ಆವರ್ತಿತ ಠೇವಣಿ ಯೋಜನೆಯಡಿ ನಗದು ಸಂಗ್ರಹಿಸಿ, ಠೇವಣಿಯಿಟ್ಟು ಆ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಮಾದರಿಯಾದ ಯೋಜನೆಯೊಂದು ಅನುಷ್ಠಾನಕ್ಕೆ ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಉಡುಪಿ ವಲಯದಲ್ಲಿ ಸರಕಾರಿ ಶಾಲೆಗಳಿಗಿಂತ ಹೆಚ್ಚಾಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳೇ ಹೆಚ್ಚಾಗಿವೆ. ಇಂತಹ ಶಾಲೆಗಳನ್ನು ಕಟ್ಟಿ, ಯಶಸ್ವಿಯಾಗಿ ಬೆಳೆಸುವಲ್ಲಿ ಗ್ರಾಮದ ಹಿರಿಯರು ಮತ್ತು ಹಳೆ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯವಾಗಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೀಲಾಧರ ಶೆಟ್ಟಿ ವಹಿಸಿದ್ದರು.
ಈ ಸಂದರ್ಭ ಶಿಕ್ಷಣ ಸಂಯೋಜಕ ಶಂಕರ ಸುವರ್ಣ, ಮಜೂರು ಗ್ರಾ.ಪಂ. ಅಧ್ಯಕ್ಷೆ ಶರ್ಮಿಳಾ ಜಗದೀಶ್,ಭಾಸ್ಕರ ಕುಮಾರ್, ನಿರ್ಮಲ್ ಕುಮಾರ್ ಹೆಗ್ಡೆ, ಶಶಿಶೇಖರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/08/2021 01:42 pm