ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ವಿವಾದಕ್ಕೆ ಗುರಿಯಾಗಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ಇಂದು ಮಂಗಳೂರಿನಲ್ಲಿ ನಡೆಯಬೇಕಿದ್ದ 'ನಾಗರಿಕ ಸನ್ಮಾನ' ಕಾರ್ಯಕ್ರಮವನ್ನು ಆಯೋಜಕರು ಮುಂದೂಡಿದ್ದಾರೆ.
ಮಂಗಳೂರಿನ ಚಿಂತನಾ ಗಂಗಾ ವೇದಿಕೆಯಿಂದ ಇಂದು ಸಂಜೆ ರೋಹಿತ್ ಚಕ್ರತೀರ್ಥರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದರು. ಶಾಸಕ ವೇದವ್ಯಾಸ ಕಾಮತ್ ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಾಹಿತಿಗಳಿಗೆ, ಮಹಾನ್ ಚೇತನಗಳಿಗೆ ಅವಮಾನ, ನಾಡಗೀತೆಗೆ ಅಪಮಾನ ಮಾಡಿರುವ ರೋಹಿತ್ ಚಕ್ರತೀರ್ಥರಿಗೆ ನಾಗರಿಕ ಸನ್ಮಾನ ಸಲ್ಲದು. ಅಲ್ಲದೆ ವಿವಿ ಕುಲಪತಿ, ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಮಾನ ಮನಸ್ಕರ 'ದೇಶಪ್ರೇಮಿ ಸಂಘಟನೆಗಳ ಒಕ್ಕೂಟ' ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸಂದರ್ಭ ಮುತ್ತಿಗೆ ಹಾಕುವ, ಗಲಾಟೆ, ದೊಂಬಿ ನಡೆಯುವ ಸಾಧ್ಯತೆಯಿದೆ. ಆದ್ದರಿಂದ ರೋಹಿತ್ ಚಕ್ರತೀರ್ಥರಿಗೆ ನಡೆಸಲಾಗುವ ನಾಗರಿಕ ಸನ್ಮಾನವನ್ನು ಮುಂದೂಡಿರುವ ಚಿಂತನ ಗಂಗಾ ವೇದಿಕೆಯು ಕಾರ್ಯಕ್ರಮದಿಂದ ಹಿಂದೆ ಸರಿದಿದೆ.
Kshetra Samachara
25/06/2022 08:37 am