ಉಪ್ಪಿನಂಗಡಿ: ʼಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿʼ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ವರ್ಷಪೂರ್ತಿ `ಅಮೃತ ಸಂಗಮ' ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರಿಗೆ ಗೌರವಾರ್ಪಣೆ ಇಂದು ಸಂಗಮ ಕೃಪಾ ಸಭಾಂಗಣದಲ್ಲಿ ನಡೆಯಿತು.
ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡಿ, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ರೂಪಿಸಲು ಸಾಧ್ಯವಾಗದಿರುವುದರಿಂದ ಕಷ್ಟಪಟ್ಟು ಬೆಳೆದ ಬೆಳೆಯಿಂದ ದಲ್ಲಾಳಿ ಮಾತ್ರ ಲಾಭ ಮಾಡುವಂತಾಗಿದೆ. ಆದ್ದರಿಂದ ರೈತರು ಬೆಳೆ ಬೆಳೆಯಲು ಮಾತ್ರ ಸೀಮಿತರಾಗದೆ ಸಣ್ಣ ಸಣ್ಣ ತಂಡ ರಚಿಸಿಕೊಂಡು ಸಹಕಾರಿ ಸಂಘ ಮೂಲಕ ತಮ್ಮ ಬೆಳೆ ತಾವೇ ಉತ್ತಮ ಬೆಲೆಗೆ ಮಾರಾಟ ಮಾಡುವಂತಾಗಬೇಕು.
ಪ್ರಧಾನಿ ನರೇಂದ್ರ ಮೋದಿಯವರೂ ʼಆತ್ಮ ನಿರ್ಭರ ಭಾರತʼ ಕಲ್ಪನೆಯಡಿ ಸಣ್ಣ ಸಣ್ಣ ಗುಂಪುಗಳಿಗೂ ಆರ್ಥಿಕ ಸ್ವಾವಲಂಬಿಗಳಾಗಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸನ್ಮಾನಿಸಿದರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪ್ಪಿನಂಗಡಿ ಸ.ವ್ಯ. ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್,
ಉಪ್ಪಿನಂಗಡಿ ಸ.ವ್ಯ. ಸಂಘ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/05/2022 08:17 pm