ಕಾರ್ಕಳ: ದತ್ತಾತ್ರೇಯ ದೇವರ ಪವಿತ್ರ ಕ್ಷೇತ್ರವಾಗಿರುವ ದತ್ತಪೀಠ ಹಿಂದುಗಳ ತೀರ್ಥಕ್ಷೇತ್ರ ಆಗಬೇಕು. ಅಲ್ಲಿ ಹಿಂದೂ ಅರ್ಚಕರ ನೇಮಕ ಶೀಘ್ರ ಆಗಬೇಕು. ಅಲ್ಲಿರುವ ಅನಧಿಕೃತ ಗೋರಿಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಕರ್ನಾಟಕ ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ ಹೇಳಿದರು.
ಕಾರ್ಕಳದ ಹಿಂದೂ ಸಂಗಮ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ದತ್ತಜಯಂತಿಯ ಅಂಗವಾಗಿ ಡಿ.12ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಹಿಂದೂ ಸಂಗಮದಲ್ಲಿ ಸುಮಾರು 25 ಸಾವಿರ ಮಂದಿ ಹಿಂದೂಭಾಂದವರು ಸೇರುವ ನಿರೀಕ್ಷೆಯಿದೆ. ಸ್ವರಾಜ್ಯ ಮೈದಾನದಿಂದ ಗಾಂಧಿ ಮೈದಾನದವರೆಗೆ ಭಜನಾ ತಂಡ, ವಿವಿಧ ಟ್ಯಾಬ್ಲೋಗಳೊಂದಿಗೆ ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಸಾಧ್ವಿ ಸರಸ್ವತಿ ದಿಕ್ಸೂಚಿ ಭಾಷಣ ಮಾಡಲಿದ್ದು, ಪೇಜಾವರ ಸ್ವಾಮೀಜಿಯವರು ಹಾಗೂ ಆನೆಗುಂದಿ ಮಹಾಸಂಸ್ಥಾನದ ಕಾಳ ಹಸ್ತೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಲಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನ ಮತ್ತು ಜಾಗೃತಿಗಾಗಿ, ಪೂರ್ವಭಾವಿಯಾಗಿ ಧರ್ಮರಕ್ಷ ರಥ ತಾಲೂಕಿನಾದ್ಯಂತ ಗ್ರಾಮ ಗ್ರಾಮಗಳಿಗೆ ಸಂಚರಿಸುತ್ತಿದ್ದು, ಡಿ 5ರಂದು ಕಾರ್ಕಳ ನಗರಕ್ಕೆ ಪ್ರವೇಶ ಮಾಡಲಿದೆ ಎಂದು ಸುನಿಲ್ ಕೆ.ಆರ್ ಹೇಳಿದರು.
Kshetra Samachara
04/12/2021 11:07 am