ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂದರ್ಭ ಮಹಾನವಮಿ, ವಿಜಯದಶಮಿಯಂದು ಸಹಸ್ರಾರು ಭಕ್ತರು ಭೇಟಿ ನೀಡಿದ್ದು, ವಾಹನ ಪೂಜೆ, ಅಕ್ಷರಾಭ್ಯಾಸ, ಸೀರೆ ಕಾಣಿಕೆ ಸೇರಿದಂತೆ ಹಲವು ಸೇವೆಗಳನ್ನು ಮಾಡಿಸಿದ್ದಾರೆ.
ಹೂವಿನ ಪೂಜೆ, ಕುಂಕುಮಾರ್ಚನೆ ಸೇವೆ ಕೂಡ ಸಹಸ್ರ ಸಂಖ್ಯೆಯಲ್ಲಿ ಮಾಡಿಸಿದ್ದಾರೆ. ಮಹಾನವಮಿಯ ಗುರುವಾರ ರಾತ್ರಿ ಶ್ರೀ ದೇವಿಗೆ ಬಂಗಾರ, ಮಲ್ಲಿಗೆ, ಬೆಳ್ಳಿ ಹೀಗೆ ನಾನಾ ಬಗೆಯ ಸುಮಾರು ಎರಡು ಕಾಲು ಗಂಟೆಗಳ ಕಾಲ ದೇವರ ರಂಗಪೂಜೆ ನಡೆದಿದ್ದು ,600ಕ್ಕೂ ಹೆಚ್ಚು ಆರತಿಗಳನ್ನು ಬೆಳಗಲಾಯಿತು.
ನವರಾತ್ರಿಯ ದಿನಗಳಲ್ಲಿ ಐನೂರಕ್ಕೂ ಹೆಚ್ಚು ಹುಲಿ ಕರಡಿ, ಸಿಂಹ ಹೀಗೆ ನಾನಾ ವೇಷಧಾರಿಗಳು ಮಧ್ಯರಾತ್ರಿಯವರೆಗೂ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸಿ ವೇಷ ಕಳಚಿದ್ದಾರೆ. ಭಕ್ತರಿಗೆ ಭೋಜನ ಪ್ರಸಾದದೊಂದಿಗೆ ಕಡುಬು ಪ್ರಸಾದ ವಿಶೇಷವಾಗಿತ್ತು. ಸುಮಾರು 3 ಕಿಂಟ್ವಾ ಲ್ ಅಕ್ಕಿಯ 100 ಕಿಲೋ ಉದ್ದಿನ ಬೆಳೆ ಮೂಲಕ ಹಿಂದಿನ ದಿನ ದೋಣಿಯೊಂದರಲ್ಲಿ ಹಿಟ್ಟು ಹಾಕಿ ಮರುದಿನ ಕಡುಬು ಮಾಡಿ ಭಕ್ತರಿಗೆ ಹಂಚುವುದು ಇಲ್ಲಿನ ವಿಶೇಷ.
ಮಹಾನವಮಿಯಂದು ಸುಮಾರು 2,000 ವಾಹನಗಳಿಗೆ ಪೂಜೆ, ವಿಜಯದಶಮಿಯಂದು 600 ರಷ್ಟು ವಾಹನಗಳಿಗೆ ಪೂಜೆ ನಡೆದಿದೆ. ನವರಾತ್ರಿ ದಿನಗಳಲ್ಲಿ 38,000 ಹೂವಿನ ಪೂಜೆ, 150ಕ್ಕೂ ಮಿಕ್ಕಿ ಮಕ್ಕಳಿಗೆ ಅಕ್ಷರಾಭ್ಯಾಸ, 260 ಮಕ್ಕಳಿಗೆ ಅನ್ನಪ್ರಾಶನ ನಡೆದಿದೆ. ಲಲಿತಾ ಪಂಚಮಿ ದಿನದಂದು ಭಕ್ತರಿಗೆ ಶೇಷವಸ್ತ್ರ ವಿತರಣೆ ಇರಲಿಲ್ಲ. ಆದರೆ, 1300ಕ್ಕೂ ಹೆಚ್ಚು ದೇವರ ಶೇಷವಸ್ತ್ರವನ್ನು ಭಕ್ತರು ಖರೀದಿಸಿದ್ದು, 1900ಕ್ಕೂ ಹೆಚ್ಚು ಸೀರೆಗಳು ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಬಂದಿವೆ.
ದೇವಳದಲ್ಲಿ ಶುಕ್ರವಾರ ಹಾಗೂ ರಜಾದಿನದಂದು ವಿಜಯದಶಮಿ ಯಾಗಿರುವುದರಿಂದ ಬೆಳಗ್ಗೆ ಯಿಂದಲೂ ಭಕ್ತರ ದಂಡು ಕಟೀಲು ಕ್ಷೇತ್ರಕ್ಕೆ ಆಗಮಿಸಿದ್ದು, ಮಧ್ಯಾಹ್ನ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ವ್ಯವಸ್ಥೆ ,ಭೋಜನ ಪ್ರಸಾದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಕಟೀಲು ಕಾಲೇಜು ಪ್ರೌಢಶಾಲೆಯ 200 ಸ್ವಯಂ ಸೇವಕರ ತಂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
Kshetra Samachara
15/10/2021 08:29 pm