ಕಟೀಲು : ಶುದ್ಧ ಕುಂಕುಮ ಧಾರಣೆ ನಮ್ಮಲ್ಲಿ ದೈಹಿಕ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹೊಸ ಚೈತನ್ಯ ಉಂಟು ಮಾಡುತ್ತದೆ. ಕಲಬೆರಕೆಯ ಕುಂಕುಮ ಬಳಸದೆ ನಾವೇ ಬೆಳೆಸಿದ ಅರಸಿನವನ್ನು ಬಳಸಿ ತಯಾರಿಸಿದ ಕುಂಕುಮ ಹತ್ತು ವರುಷಗಳ ತನಕವೂ ಹಾಳಾಗದೆ ಉಳಿಯಬಲ್ಲುದು. ಅದರ ಬಳಕೆಯಿಂದ ನಮ್ಮಲ್ಲಿ ಬದಲಾಗುವ ಧನಾತ್ಮಕ ಬೆಳವಣಿಗೆ ಆಗುವುದನ್ನು ಕಾಣಬಹುದು ಎಂದು ಮಂಗಳೂರಿನ ಯೋಗ ಶಿಕ್ಷಕಿ ದೇವಿಕಾ ಪುರುಷೋತ್ತಮ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ಸರಸ್ವತೀ ಸದನದಲ್ಲಿ ನಡೆದ ಶುದ್ಧ ಕುಂಕುಮ ತಯಾರಿ ಬಗ್ಗೆ ತರಬೇತಿ ನೀಡಿ ಕುಂಕುಮದ ಉಪಯೋಗಗಳ ಬಗ್ಗೆ ಮಾತನಾಡಿದರು.
ಶಿಬಿರ ಉದ್ಘಾಟಿಸಿ ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಸುಲಭ ಹಾಗೂ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ವಸ್ತುಗಳನ್ನೇ ಬಳಸಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಎಳ್ಳುವಿಗಿಂತ ಎಳ್ಳೆಣ್ಣೆ ಕಡಿಮೆ ಬೆಲೆಗೆ ಸಿಗುತ್ತದೆ. ಕುಂಕುಮವೂ ಇದೇ ರೀತಿ. ಚೀನಾದ ವಸ್ತುಗಳ ಬದಲು ನಮ್ಮ ನಾಡಿನ ವಸ್ತುಗಳನ್ನು ಬಳಸಿ, ಎಲ್ಲರಲ್ಲೂ ಸ್ವದೇಶೀ ಚಿಂತನೆಯನ್ನು ಮೂಡಿಸಬೇಕಾಗಿದೆ ಎಂದರು.
ಶ್ರೀನಿವಾಸಪುರ ವಿಠೋಭ ರುಕ್ಮಿಣಿ ದೇವಸ್ಥಾನ ಸಮಿತಿ ಅಧ್ಯಕ್ಷ ಪಾಂಡುರಂಗ ಭಟ್ ಉಪಸ್ಥಿತರಿದ್ದರು.ಸುಮಾರು ನೂರು ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು.
Kshetra Samachara
26/09/2021 03:32 pm