ಮೂಡುಬಿದಿರೆ: ಇಲ್ಲಿನ 'ಕೋಟಿ-ಚೆನ್ನಯ' ಜೋಡುಕರೆ ಕಂಬಳ ಸಮಿತಿ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ "ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ"ದ ಕೋಟಿ-ಚೆನ್ನಯ ಜೋಡುಕರೆಯಲ್ಲಿ 18ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವ ಇಂದು ಬೆಳಿಗ್ಗೆ ಆರಂಭಗೊಂಡಿತು.
ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯಲ್ಲಿ ಆಲಂಗಾರು ಚರ್ಚ್‌ನ ಧರ್ಮಗುರು ರೆ.ಫಾ.ವಾಲ್ಟರ್ ಡಿಸೋಜ, ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಈಶ್ವರ ಭಟ್, ಪುತ್ತಿಗೆ ನೂರಾನಿ ಮಸ್ಜಿದ್ ನ ಮೌಲಾನ ಝಿಯಾವುಲ್ಲ ಹಾಗೂ ಸುಧೀರ್ ಕುಂಟಾಡಿ ಸೇರಿ ಕಂಬಳದ ಕರೆಗಳಿಗೆ ದೇವಸ್ಥಾನಗಳ ಪ್ರಸಾದ ಹಾಕಿ ನಂತರ ದೀಪ ಬೆಳಗಿಸಿ ಕಂಬಳಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ, ನಮ್ಮ ಜಾನಪದ ಕಲೆಗಳು, ಸಾಹಸ ಕ್ರೀಡೆಗಳು ಉಳಿಯಬೇಕು. ಕಂಬಳ ಜಾನಪದ ಕ್ರೀಡೆಯಾದರೂ ಇದರಲ್ಲಿ ಜೀವನ ಪಾಠವಿದೆ. ಆತ್ಮವಿಶ್ವಾಸ ತುಂಬಿದ ಮತ್ತು ಧೈರ್ಯದಿಂದ ಕೂಡಿದ ಕ್ರೀಡೆ ಇದಾಗಿದೆ. ಇಲ್ಲಿ ಪ್ರಾಣಿಗಳಿಗೆ ಹಿಂಸೆಯಾಗದ ರೀತಿಯಲ್ಲಿ ಜನರಿಗೆ ಮನರಂಜನೆ ಸಿಗಲಿ ಎಂದರು.
ಮೂಡುಬಿದಿರೆ ಕಂಬಳವನ್ನು 15 ವರ್ಷಗಳ ಕಾಲ ಯಶಸ್ವಿಯಾಗಿ ಸಂಘಟಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಗೌರವಾಧ್ಯಕ್ಷರ ನೆಲೆಯಲ್ಲಿ ಮಾತನಾಡಿ, ಪಕ್ಷಗಳ ಕಾರ್ಯಕ್ರಮ ನಡೆಸಲು ಬೇರೆ ಬೇರೆ ಕಡೆಗಳಿಂದ ಟೆಂಪೋದಲ್ಲಿ ಜನರನ್ನು ಕರೆದುಕೊಂಡು ಬರಬೇಕಾಗಿದೆ. ಆದರೆ, ಕಂಬಳಕ್ಕೆ ಜನರು ಅವರಾಗಿಯೇ ಬಂದು ಸೇರುತ್ತಾರೆ, ಇದು ತುಳುನಾಡಿನ ವೈಶಿಷ್ಟ್ಯತೆ. ಈಗಿನ ಶಾಸಕರೂ ಪ್ರೋತ್ಸಾಹ ಕೊಟ್ಟು ಎಲ್ಲ ಜನರನ್ನು ಸೇರಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಮೂಡುಬಿದಿರೆ ಕಂಬಳವನ್ನು ದೇಶದಲ್ಲಿಯೇ ಮಾದರಿ ಕಂಬಳ ಎಂದು ತೋರಿಸಿ ಕೊಡೋಣ ಎಂದರು.
ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ರಾಜಕೀಯವು ಚುನಾವಣೆ ಸಂದರ್ಭ ಮಾತ್ರ. ಊರಿನ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ಸೇರಿದರೆ ಮಾತ್ರ ಸಾಧ್ಯ. ಅಭಯಚಂದ್ರ ಜೈನ್ ಅವರು 2 ವರ್ಷಗಳ ನಂತರ ಕಂಬಳಕ್ಕೆ ಬಂದಿರುವುದು ತನಗೆ ಖುಷಿ ಕೊಟ್ಟಿದೆ. ಕಂಬಳಕ್ಕಾಗಿ ಗುಣಪಾಲ ಕಡಂಬ ಮತ್ತು ಭಾಸ್ಕರ್ ಕೋಟ್ಯಾನ್ ಹೇಗೆ ಕೆಲಸ ಮಾಡುತ್ತಾರೋ ಹಾಗೆ ನಾನು ಮತ್ತು ನೀವು ಕೋಟಿ-ಚೆನ್ನಯರಂತೆ ಕೆಲಸ ಮಾಡೋಣ ಎಂದು ಅಭಯಚಂದ್ರರಲ್ಲಿ ವಿನಂತಿಸಿದರು.
ಕನ್ನಡ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ., ಜಿಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪುರಸಭೆ ಅಧ್ಯಕ್ಷ ಪ್ರಸಾದ್ ಭಂಡಾರಿ, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಮೂಡುಬಿದಿರೆ ರೋಟರಿ ಅಧ್ಯಕ್ಷ ಡಾ. ಸುದೀಪ್ ಕುಮಾರ್, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಉದ್ಯಮಿ ವಿಶ್ವನಾಥ ಪ್ರಭು ಕಂಬಳ ಸಮಿತಿ ಕೋಶಾಧಿಕಾರಿ, ಭಾಸ್ಕರ್ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಉದ್ಘಾಟನೆಗೆ ಮೊದಲು ಒಂಟಿಕಟ್ಟೆಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಪೂಜೆ ಸಲ್ಲಿಸಲಾಯಿತು.
Kshetra Samachara
20/02/2021 04:13 pm