ಕಡಬ: ಕಡಬ ತಾಲೂಕಿನ ಹಿಂದುಳಿದ ಪ್ರದೇಶ ಸಿರಿಬಾಗಿಲು, ಕೊಂಬಾರು ಗ್ರಾಮದಲ್ಲಿ ಜ. 31ರಂದು ನಡೆಯುವ ದ.ಕ. ಜಿಲ್ಲಾ ಪತ್ರಕರ್ತರ ಗ್ರಾಮ ವಾಸ್ತವ್ಯಕ್ಕೆ ರಾಜ್ಯ ಸರಕಾರದ ವಿವಿಧ ಇಲಾಖೆ ಸಚಿವರು, ರಾಜ್ಯ- ಜಿಲ್ಲಾ ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಭಾಗವಹಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಪರಿಹಾರ ಕಲ್ಪಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಹೇಳಿದ್ದಾರೆ.
ಕೊಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2018ರ ಡಿಸೆಂಬರ್ 23ರಂದು ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಪ್ರಥಮ ಬಾರಿಗೆ ಹಾಗೂ 2020 ಜನವರಿ 5ರಂದು ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ನಡೆದ ಪತ್ರಕರ್ತರ ಎರಡನೇ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನಡೆದಿದೆ ಮತ್ತು ಈ ಗ್ರಾಮಗಳ ಹಲವು ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದೀಗ ಮೂರನೇ ಗ್ರಾಮ ವಾಸ್ತವ್ಯ ಕೊಂಬಾರಿನಲ್ಲಿ ಜ.31ರಂದು ನಡೆಯಲಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಈ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮದ ಹಲವಾರು ಸಮಸ್ಯೆಗಳು ಈ ಸಮಯದಲ್ಲಿ ಪರಿಹರಿಸಿಕೊಳ್ಳಲು ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕಡಬ ತಾಲೂಕಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕೊಂಬಾರು, ಸಿರಿಬಾಗಿಲು ಗ್ರಾಮದ ನಿವಾಸಿಗಳು ಉಪಸ್ಥಿತರಿದ್ದರು.
Kshetra Samachara
16/01/2021 10:37 pm