ಮಂಗಳೂರು: ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ನಾಳೆ ಆಯೋಜಿಸಿರುವ ‘ಭಾರತ ಮಾತಾ ಪೂಜಾ ದಿನ’ ಕಾರ್ಯಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿರೋಧಿಸಿದೆ. ಈ ಕಾರ್ಯಕ್ರಮವನ್ನು ತಕ್ಷಣಕ್ಕೆ ಕೈಬಿಡುವಂತೆ ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿಯು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರಿಗೆ ಮನವಿ ನೀಡಿದೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ತಾಜುದ್ದೀನ್, ಆಗಸ್ಟ್ 11 ಕ್ಕೆ ಹಿಂದುತ್ವ ಸಿದ್ಧಾಂತದ ಕಾರ್ಯಕ್ರಮವನ್ನು ಆಯೋಜಿಸಿರುವುದು ಖಂಡನೀಯ. ಇದನ್ನು ರದ್ದುಗೊಳಿಸಬೇಕು. ಭಾರತದ ಭೂಪಟವನ್ನೇ ಬದಲಾಯಿಸಿ, ಭಗವಧ್ವಜ ಹಿಡಿದ ಮಹಿಳೆಯನ್ನು ಚಿತ್ರೀಕರಿಸಿ ದೇಶದ್ರೋಹದ ಕೆಲಸವನ್ನು ಕಾಲೇಜು ಪ್ರಾಂಶುಪಾಲರ ಬೆಂಬಲದೊಂದಿಗೆ ಕಾಲೇಜು ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಎಬಿವಿಪಿ ಮಾಡಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲವೆಂದು ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಹಂಪನಕಟ್ಟೆ ಕಾಲೇಜು ಪ್ರಾಂಶುಪಾಲರಿಗೆ ಇದು ಧಾರ್ಮಿಕ ಆಚರಣೆಯಾಗಿ ಕಾಣಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷ ಸರ್ಫುದ್ದೀನ್, ಜಿಲ್ಲಾ ನಾಯಕರಾದ ಸಂಶುದ್ದೀನ್, ಅಫೀಝ್ ಉಪಸ್ಥಿತರಿದ್ದರು.
PublicNext
10/08/2022 05:12 pm