ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಮುಖಿ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ತಿಳಿಸಿದರು.
ವರ್ಷಕ್ಕೊಮ್ಮೆ ಆರ್ಥಿಕ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಸಂಘಟನೆಗಳು ಇವೆ. ಆದರೆ ಪ್ರತೀ ತಿಂಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜಕಲ್ಯಾಣ ಯೋಜನೆಯಡಿಯಲ್ಲಿ ಬಡವರನ್ನು ಗುರುತಿಸುವ ಕೆಲಸ ಮಾಡುತ್ತಿದೆ.
ಸಾಧಕರನ್ನು ಕೂಡಾ ಗೌರವಿಸುತ್ತಿದೆ. ಇಂದು ಎಲ್ಲಾ ಕಡೆ ಅತೀ ಹೆಚ್ಚು ಬಂಟರ ಸಮುದಾಯದ ಭವನಗಳಿವೆ. ಇದನ್ನು ಎಲ್ಲಾ ಸಮುದಾಯ ಅನುಕರಣೆ ಮಾಡಬೇಕಾಗಿದೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ವಹಿಸಿ ಮಾತನಾಡಿ, ದಾನಿಗಳು ದಾನ ನೀಡಿದರೆ ಮಾತ್ರವೇ ಕಾರ್ಯಕ್ರಮ ಮಾಡಲು ಸಾಧ್ಯ. ಇಂದು ದಾನಿಗಳ ಸಹಾಯದಿಂದ ವರ್ಷಕ್ಕೊಮ್ಮೆ ಮಾಡುತ್ತಿದ್ದ ಕಾರ್ಯಕ್ರಮ ಪ್ರತಿ ತಿಂಗಳು ನಡೆಯುತ್ತಿದೆ. ಒಕ್ಕೂಟಕ್ಕೆ ಯಾರೇ ಸಹಾಯ ಕೋರಿದರೂ ಸಹಾಯ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿ, ಸಮಾಜ ಕಲ್ಯಾಣ ಯೋಜನೆಯಡಿ ವೈದ್ಯಕೀಯ, ಶಿಕ್ಷಣ, ವಿವಾಹ, ವಸತಿ ಇತರ ಆರ್ಥಿಕ ಸಂಕಷ್ಟದಲ್ಲಿರುವ ಫಲಾನುಭವಿಗಾಗಿ ಒಟ್ಟು 16 ಲಕ್ಷ ರೂ. ಮೊತ್ತದ ಚೆಕ್ ಗಳನ್ನು ವಿತರಿಸಲಾಯಿತು.
Kshetra Samachara
09/03/2022 08:34 pm