ಮೂಡುಬಿದಿರೆ: ರಾಜ್ಯದಲ್ಲಿ ಭರತನಾಟ್ಯ ಕಲಿಯುವವರ ಸಂಖ್ಯೆಯೂ ಹೆಚ್ಚಿದೆ. ನೃತ್ಯ ತರಬೇತಿ ನೀಡುವ ಸಂಸ್ಥೆಗಳೂ ಹೆಚ್ಚಿವೆ. ಭರತನಾಟ್ಯ ಕಲಿಕೆಗೆ ಪೂರಕವಾದ ಕೃತಿಗಳು ತೆಲುಗು, ತಮಿಳಿನಲ್ಲಿದ್ದು ಕನ್ನಡಕ್ಕೆ ಭಾಷಾಂತರಗೊಂಡಿದ್ದರೂ ಕಲಿಸುವ ಗುರುಗಳು ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಕನ್ನಡದಲ್ಲೇ ಕಲಿಸುವಂತಾದರೆ ಕಲಿಯುವವರಿಗೂ, ಆಸಕ್ತರಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಅವರು ನಾರಾಯಣಗುರು ಸಭಾಭವನದಲ್ಲಿ ನಡೆದ ಭಾವನಾ ಬಾಲಕೃಷ್ಣ ಅವರ ಭರತನಾಟ್ಯ ರಂಗಪ್ರವೇಶ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯಗಳು ನಮ್ಮ ದೊಡ್ಡ ಸಂಪತ್ತು. ಅದನ್ನು ಮುಂದಿನ ಪೀಳಿಗೆಗೆ ಕಲಿಸಬೇಕು. ಪೋಷಕರು ಮಕ್ಕಳನ್ನು ವಿದ್ಯೆಯ ಜೊತೆಗೆ ಇಂತಹ ಪ್ರಕಾರಗಳಲ್ಲಿಯೂ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನೃತ್ಯನಿಕೇತನದ ಗುರು ಉಳ್ಳಾಲ ಮೋಹನಕುಮಾರ್ ಮಾತನಾಡಿ ರಂಗಪ್ರವೇಶವೆಂಬುದು ಭರತನಾಟ್ಯದಲ್ಲಿ ಮಾತ್ರ ಇದೆ. ಗುರುಗಳಲ್ಲಿ ಕಲಿತು ಪರಿಪೂರ್ಣವಾದ ಬಳಿಕ ಅವರ ಅನುಮತಿಯೊಂದಿಗೆ ರಂಗಪ್ರವೇಶ ಮಾಡಲು ಸಾಧ್ಯ. ಇಂತಹ ಕಲೆಯನ್ನು ಕಲಿಸುವ ಗುರುಗಳೂ ನಿರಂತರ ಅಧ್ಯಯನಶೀಲರಾಗಬೇಕು. ಕಲಿಕೆಯ ವಿಸ್ತಾರವನ್ನು ಹೆಚ್ಚಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾದ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್, ವಿಶ್ವಕಲಾನಿಕೇತನದ ವಿದುಷಿ ನಯನ ವಿ.ರೈ ಭಾಗವಹಿಸಿ ಶುಭ ಹಾರೈಸಿದರು. ರಂಗಪ್ರವೇಶಗೈದ ಭಾವನಾ ಬಾಲ ಕೃಷ್ಣ ಅವರು ನೃತ್ಯಗುರುಗಳಾದ ಸುಖದಾ ಬರ್ವೆ, ಶಾರದಾ ಮಣಿಶೇಖರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಭಾವನಾ ಅವರ ತಂದೆತಾಯಿಯರಾದ ಬಾಲಕೃಷ್ಣ ಮತ್ತು ವಂದನಾ ಉಪಸ್ಥಿತರಿದ್ದರು. ಶ್ರೀರಾಜ್ ಸ್ವಾಗತಿಸಿ ವೈಷ್ಣವ ಹೆಗ್ಡೆ ವಂದಿಸಿದರು. ಶಾಲಿನಿ ಆತ್ಮಭೂಷಣ್ ಹಾಗೂ ಗುರುಪ್ರಸಾದ್ ಕಾರ‍್ಯಕ್ರಮ ನಿರ್ವಹಿಸಿದರು.
Kshetra Samachara
10/05/2022 04:34 pm