ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಅಳಿಯೂರು ಸರಕಾರಿ ಶಾಲೆಗೆ ನ್ಯೂ ಲುಕ್; ಗ್ರಾಮಸ್ಥರ ಪರಿಶ್ರಮದಿಂದ ಉಳಿದ ವಿದ್ಯಾದೇಗುಲ

ಮೂಡುಬಿದಿರೆ: ಎರಡು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಹಂತದಲ್ಲಿದ್ದ ಅಳಿಯೂರು ಸರಕಾರಿ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಕಾಯಕಲ್ಪ ನೀಡಿದ್ದು, ಲಾಕ್‍ಡೌನ್ ಸಂದರ್ಭ ಶ್ರಮದಾನ ಮೂಲಕ ಹೊಸ ರೂಪ ನೀಡಿದ್ದಾರೆ.

ಶಾಲೆ ಸುಂದರವಾಗಿಸುವುದು ಮಾತ್ರವಲ್ಲದೆ, ಕಲಿಕೆ ಗುಣಮಟ್ಟವನ್ನೂ ಹೆಚ್ಚಿಸಲು ಗ್ರಾಮಸ್ಥರು ಕೈಜೋಡಿಸಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ವೃದ್ಧಿಸಿದೆ. ಅಳಿಯೂರಿನಲ್ಲಿ 85 ವರ್ಷಗಳ ಹಿಂದೆ ಆರಂಭಗೊಂಡಿದ್ದ ಸರಕಾರಿ ಹಿ.ಪ್ರಾ. ಶಾಲೆ ಕಟ್ಟಡವೂ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳು, ನಾನಾ ಸಂಘಟನೆ ಪದಾಧಿಕಾರಿಗಳು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿ, ಶಾಲೆ ಅಭಿವೃದ್ಧಿಗಾಗಿ ಸಮನ್ವಯ ವೇದಿಕೆ ರಚಿಸಿದರು. 2 ವರ್ಷಗಳ ಹಿಂದೆ ಸರಕಾರಿ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಿ ಇಂಗ್ಲಿಷ್ ಮಾಧ್ಯಮಕ್ಕಾಗಿ ಬೇರೆ ಶಾಲೆಗಳಿಗೆ ಹಂಚಿ ಹೋಗುತ್ತಿದ್ದ ಮಕ್ಕಳನ್ನು ಇಲ್ಲಿಗೆ ಬರುವಂತೆ ಮಾಡಲಾಯಿತು.

ಮಕ್ಕಳನ್ನು ಸೆಳೆಯಬೇಕಾದರೆ ಶಾಲೆಯ ಕಟ್ಟಡವೂ ಖಾಸಗಿ ಶಾಲೆಯಂತೆ ಆಕರ್ಷಕವಾಗಿದ್ದರೆ ಇನ್ನೂ ಒಳಿತು ಎಂಬುದನ್ನು ಮನಗಂಡ ಸಮನ್ವಯ ವೇದಿಕೆ ಲಾಕ್‍ಡೌನ್ ಸಮಯದಲ್ಲಿ ದಾನಿಗಳ ಸಹಕಾರ ಮತ್ತು ಶ್ರಮದಾನದ ಮೂಲಕ ಶಾಲೆಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಕೈ ಹಾಕಿತ್ತು. ಈ ವೇಳೆ ಶಾಲೆ ಕಟ್ಟಡವೂ ಶಿಥಿಲಗೊಂಡು ಮಳೆನೀರು ಒಳಗಡೆ ಸೋರುತ್ತಿರುವ ಬಗ್ಗೆ ಸಮಿತಿಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತಂದಾಗ ತಾವು ರಿಪೇರಿ ಆರಂಭಿಸಿ ನಾನು ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಅದರಂತೆ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರು ಮುಂದಾದರು.

ಲಾಕ್‍ಡೌನ್ ಸಂದರ್ಭ ಊರಿನ ಸಂಘಟನೆಗಳಾದ ಕೋಟಿ-ಚೆನ್ನಯ ಯುವ ಶಕ್ತಿ, ಹಳೆ ವಿದ್ಯಾರ್ಥಿಗಳು, ಆಟೋ ಚಾಲಕ-ಮಾಲೀಕರ ಸಂಘ, ಶಾಲಾಡಳಿತ ಮಂಡಳಿ, ವಿದ್ಯಾರ್ಥಿಗಳ ಪೋಷಕರು ಹನುಮಾನ್ ಫ್ರೆಂಡ್ಸ್ ನ ಸುಮಾರು 800ರಷ್ಟು ಸದಸ್ಯರು ಸೇರಿಕೊಂಡು ನಾಲ್ಕೂವರೆ ಲಕ್ಷ ರೂ. ನಷ್ಟು ಅಭಿವೃದ್ಧಿ ಕಾರ್ಯ ಮಾಡಿದರು.

ಧ್ವಜ ಸ್ತಂಭ, ಉಗ್ರಾಣ ಕೊಠಡಿ, ಸ್ಪೋರ್ಟ್ಸ್ ಕೊಠಡಿ, ಶಿಕ್ಷಕರ ಸಂಖ್ಯೆ ಹೆಚ್ಚಿರುವುದರಿಂದ ಅಟ್ಯಾಚ್ಡ್ ಬಾತ್‍ರೂಮಿನೊಂದಿಗೆ ಕೊಠಡಿ ನಿರ್ಮಿಸಲಾಗಿದ್ದು, ಸಮನ್ವಯ ಸಮಿತಿಯಿಂದ ಈಗಾಗಲೇ 7 ಲಕ್ಷ ವೆಚ್ಚದ ಕಾಮಗಾರಿ ನಡೆದಿವೆ.

* ಮಕ್ಕಳ ಸಂಖ್ಯೆ ವೃದ್ಧಿ:

2018ರಲ್ಲಿ 147 ಮಕ್ಕಳಿದ್ದರು. ಅವರಲ್ಲಿ 37 ಮಕ್ಕಳು ಹೊರ ಹೋದರು. ಆಗ ಮಕ್ಕಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ 2019ರಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಲಾಗಿದ್ದು, 70 ಮಕ್ಕಳು ದಾಖಲಾತಿ ಪಡೆದಿದ್ದಾರೆ. 8 ವರ್ಷಗಳ ಹಿಂದೆ 6, 7ನೇ ತರಗತಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ, ಶಾಸಕರ ಸಹಕಾರದಿಂದ ಎರಡು ಕೊಠಡಿಗಳು ಮಂಜೂರು ಆಗಿದೆ. ನಾಲ್ಕು ಕೊಠಡಿಗಳ ಅವಶ್ಯಕತೆ ಇದೆ. ಟಾಯ್ಲೆಟ್- ಬಾತ್ ರೂಮ್ ಬಂದಿದೆ. ಶಾಲೆಯಲ್ಲೀಗ 205 ಮಕ್ಕಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/01/2021 04:03 pm

Cinque Terre

17.66 K

Cinque Terre

0

ಸಂಬಂಧಿತ ಸುದ್ದಿ