ಉಳ್ಳಾಲ: ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಕಳೆದ ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಮಡುಗಟ್ಟಿದ ಶೋಕದ ನಡುವೆಯೂ ಕುಟುಂಬ ವರ್ಗದವರು ವಿದ್ಯಾರ್ಥಿಯ ಅಂಗಾಂಗ ದಾನಗೈಯಲು ನಿರ್ಧರಿಸಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ,ಬೈದರಪಾಲು ನಿವಾಸಿಗಳಾದ ತ್ಯಾಗರಾಜ್ ,ಮಮತಾ ಕರ್ಕೇರ ದಂಪತಿಯ ಪ್ರಥಮ ಪುತ್ರ ಯಶರಾಜ್(16) ನ ಮೆದುಳು ನಿಷ್ಕ್ರಿಯಗೊಂಡಿದೆ.ಯಶರಾಜ್ ನಗರದ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸಾಯನ್ಸ್ ನ ವಿದ್ಯಾರ್ಥಿಯಾಗಿದ್ದ.ಕಳೆದ ಸೆ.7 ರ ಬುಧವಾರ ಬೆಳಿಗ್ಗೆ ಯಶರಾಜ್ ಉಳ್ಳಾಲ ,ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಪಯಣಿಸುತ್ತಿದ್ದಾಗ ರಾ.ಹೆ.66 ಅಡಂ ಕುದ್ರುವಿನಲ್ಲಿ ಬಸ್ಸಿಂದ ಹೊರಗೆ ಎಸೆಯಲ್ಪಟ್ಟಿದ್ದ.ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜನ್ನ ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಮದ್ಯಾಹ್ನ ಆತನ ಮೆದುಳು ನಿಷ್ಕ್ರಿಯಗೊಂಡಿದೆ.ಪೋಷಕರು ಯಶರಾಜ್ನ ಅಂಗಾಂಗ ದಾನಗೈಯಲು ನಿರ್ಧರಿಸಿದ್ದು ಅದರ ಪ್ರಕ್ರಿಯೆಗಳು ನಡೆಯುತ್ತಿದೆ.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದ ಯಶರಾಜ್ ಈ ವರುಷ ನಗರದ ಎಲೋಶಿಯಸ್ ಕಾಲೇಜಿಗೆ ಎಂಟ್ರಿ ಆಗಿದ್ದ.ಯಶರಾಜ್ ಕಾಲೇಜು ಮೆಟ್ಟಿಲು ಏರಿದ ಮೇಲೆಯೇ ಸಿಟಿ ಬಸ್ಸಿನ ಪ್ರಯಾಣ ರೂಢಿ ಮಾಡಿದ್ದ. ಯಶರಾಜ್ ತಂದೆ ತ್ಯಾಗರಾಜ್ ಹೊಟೇಲ್ ಮಾಲಕರಾಗಿದ್ದು,ತಾಯಿ ಮಮತಾ ಕೊಲ್ಯದ ಜಾಯ್ ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
PublicNext
13/09/2022 08:27 pm