ಕಾಸರಗೋಡು: ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇರಿಸಿ ವಿಧ್ವಂಸಕ ಕೃತ್ಯ ಎಸಗುವ ಯತ್ನ ನಿರಂತರವಾಗಿ ಮುಂದುವರೆದಿದೆ. ಇದರಿಂದ ಮುಂದಾಗುವ ಅನಾಹುತವನ್ನು ರೈಲ್ವೇ ಪೊಲೀಸರು ವಿಫಲಗೊಳಿಸಿದ್ದಾರೆ
ಕಾಸರಗೋಡು ರೈಲು ನಿಲ್ದಾಣ ಸಮೀಪ ತಳಂಗರೆ ಪರಿಸರದಲ್ಲಿ ದುಷ್ಕರ್ಮಿಗಳು ಮಂಗಳವಾರ ಹಳಿಯಲ್ಲಿ ಕಲ್ಲುಗಳನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರವಿವಾರವೂ 3 ಕಡೆ ಜಿಲ್ಲೆಯ ತೃಕ್ಕನ್ನಾಡು, ಕುಂಬಳೆ, ಹೊಸದುರ್ಗದಲ್ಲಿ ರೈಲು ಹಳಿಯಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ಮತ್ತು ಕಬ್ಬಿಣದ ಸರಳುಗಳನ್ನಿರಿಸಿದ ಘಟನೆ ರವಿವಾರ (ಆ. 21) ನಡೆದಿದೆ.
ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆಯಿರುವ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಒಳಗೊಂಡ ಬೃಹತ್ ಗಾತ್ರದ ಕಾಂಕ್ರೀಟ್ ತುಂಡುಗಳನ್ನಿರಿಸಿ ಆ ಮೂಲಕ ರೈಲುಗಳನ್ನು ಬೀಳಿಸುವ ಸಂಚು ನಡೆಸಲಾಗಿದೆ. ರೈಲ್ವೆ ಗಾರ್ಡ್ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಭಾರಿಗಾತ್ರದ ಕಾಂಕ್ರೀಟ್ ಸ್ಲಾಬ್ ಇರಿಸಿರುವುದನ್ನು ಕಂಡು ಸಕಾಲದಲ್ಲಿ ಅದನ್ನು ಎತ್ತಿ ಬದಿಗೆ ಎಸೆದು ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದಾರೆ
ಸುಮಾರು 35 ಕಿಲೋ ತೂಕದ ಕಾಂಕ್ರೀಟ್ ಸ್ಲಾಬ್ ನ್ನು ಹಳಿ ಮೇಲೆ ಇರಿಸಲಾಗಿತ್ತು. ಈ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಬಳೆ ರೈಲು ನಿಲ್ದಾಣದ ಸುಮಾರು 400 ಮೀಟ ಉತ್ತರ ಭಾಗದಲ್ಲಿ ಹಳಿಗಳ ಮೇಲೆ ಕಲ್ಲುಗಳನ್ನು ಇರಿಸಿ ಕೃತ್ಯಕ್ಕೆ ಯತ್ನಿಸಲಾಗಿದೆ. ಹಳಿಯ ಮೇಲೆ ಕಲ್ಲುಗಳನ್ನು ಇರಿಸಿರುವುದು ಸ್ಥಳೀಯರ ಗಮನಕ್ಕೆ ಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಬಗ್ಗೆ ರೈಲ್ವೆ ಸೆಕ್ಷನ್ ಆಫೀಸರ್ ರಂಜಿತ್ ಕುಮಾರ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸದುರ್ಗದಲ್ಲಿ ರೈಲಿಗೆ ಕಲ್ಲು ಎಸೆಯಲಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಮೂರು ಘಟನೆಗಳನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್), ರೈಲ್ವೇ ಪೊಲೀಸರು ಮತ್ತು ಲೋಕಲ್ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
Kshetra Samachara
24/08/2022 12:17 pm