ಮೂಡುಬಿದಿರೆ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಾರೆಂಟ್ ಅನ್ವಯ ಬಂಧಿಸಲು ಹೋಗಿದ್ದ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಚಾಕುವಿನಿಂದ ತಿವಿದು ಪರಾರಿಯಾಗಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಮೂಡುಬಿದಿರೆ ತಾಲೂಕಿನ ತೋಡಾರು ಹಿದಾಯತ್ ನಗರದ ಮೊಹಮ್ಮದ್ ಫೈಝಲ್(33) ಬಂಧಿತ ಆರೋಪಿ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ಆರೋಪಿ ಮೊಹಮ್ಮದ್ ಫೈಝಲ್ ನನ್ನು ನ್ಯಾಯಾಲಯದ ವಾರೆಂಟ್ ನಂತೆ ಪೊಲೀಸರು ಆತನನ್ನು ವಶಪಡಿಸಿಕೊಳ್ಳಲು ಆತನ ಮನೆಗೆ ಆಗಮಿಸಿದ್ದರು. ಈ ವೇಳೆ ಆರೋಪಿಯ ತಂದೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯೊಳಗೆ ಹೋಗದಂತೆ ತಳ್ಳಿ ಅವರನ್ನು ತಡೆದಿದ್ದಾರೆ. ಈ ವೇಳೆ ಆರೋಪಿ ಮೊಹಮ್ಮದ್ ಫೈಝಲ್ ಹಿಂಬಾಗಿಲಿನಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಆಗ ಪೊಲೀಸ್ ಕಾನ್ ಸ್ಟೇಬಲ್ ಅಯ್ಯಪ್ಪ ಆತನನ್ನು ಹಿಡಿಯಲೆತ್ನಿಸಿದಾಗ ತನ್ನ ಕೈಯ್ಯಲ್ಲಿದ್ದ ಮಾರಕಾಯುಧದಿಂದ ತಿವಿಯಲು ಯತ್ನಿಸಿದ್ದಾನೆ. ಆಗ ಅವರು ತಪ್ಪಿಸಿಕೊಂಡಿದ್ದು, ಕೈಗೆ ಗಾಯವಾಗಿದೆ. ಈ ವೇಳೆ ಎಎಸ್ಐ ರಾಜೇಶ್ ಅವರು ಸಹಾಯಕ್ಕೆ ಆಗಮಿಸಿದಾಗ ಅವರಿಗೂ ಮಾರಕಾಯುಧ ತೋರಿಸಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಪೊಲೀಸರು ಹೆಚ್ಚಿನ ಸಿಬ್ಬಂದಿಯೊಂದಿಗೆ ಆಗಮಿಸಿ ಆರೋಪಿಯನ್ನು ಹುಡುಕಾಡಿದಾಗ ಆತ ತೋಡಾರಿನ ಮಸೀದಿಯ ಹಿಂಭಾಗದ ಹಾಡಿಯಲ್ಲಿ ಬಚ್ಚಿಟ್ಟುಕೊಂಡಿರುವುದನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಈತನ ತಂದೆ ಹಾಗೂ ಆರೋಪಿ ಮೊಹಮ್ಮದ್ ಫೈಝಲ್ ಮೇಲೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/08/2022 11:16 pm