ಉಳ್ಳಾಲ: ಬೆಂಗಳೂರಿನಿಂದ ಪ್ರವಾಸ ನಿಮಿತ್ತ ಉಚ್ಚಿಲ ಬಟ್ಟಂಪಾಡಿಯ ಗೆಸ್ಟ್ ಹೌಸ್‌ಗೆ ಬಂದ ತಂಡವೊಂದು ನಶೆಯೇರಿಸಿ ಪರಸ್ಪರ ದಾಂಧಲೆ ನಡೆಸಿ ಸ್ಥಳೀಯರ ಮನೆಗೂ ಅಕ್ರಮ ಪ್ರವೇಶಗೈಯಲು ಯತ್ನಿಸಿದೆ. ಹೀಗಾಗಿ ಸ್ಥಳೀಯರು ಧಾಂದಲೆಕೋರರಿಗೆ ಧರ್ಮದೇಟು ನೀಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಓಂಕಾರ್ ಎಂಬ ಕಂಪೆನಿಯ 40 ಮಂದಿ ಸಿಬ್ಬಂದಿ ಎರಡು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಶನಿವಾರದಂದು ಬಟ್ಟಂಪಾಡಿಯ ಕ್ಯಾಂಪ್ 21 ಮತ್ತು ಪಕ್ಕದ ಮತ್ತೊಂದು ಗೆಸ್ಟ್ ಹೌಸ್‌ನಲ್ಲಿ ತಂಗಿದ್ದರು. ಗೆಸ್ಟ್ ಹೌಸ್‌ನಲ್ಲಿ ತಂಗಿದ್ದ ಯುವಕರು ತಡರಾತ್ರಿ ಅಮಲೇರಿಸಿ ಮಜಾ ಉಡಾಯಿಸಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ಪೈಕಿ ನಶೆಯಲ್ಲಿದ್ದ ಶರಣ ಬಸಪ್ಪ ಎಂಬಾತ ಊಟದ ತಟ್ಟೆ ಹಿಡಿದುಕೊಂಡು ಸಮೀಪದ ದೀಕ್ಷ ಎಂಬವರ ಮನೆಗೆ ಅಕ್ರಮ ಪ್ರವೇಶಗೈಯಲು ಪ್ರಯತ್ನಿಸಿದ್ದಾನೆ. ಕೂಡಲೇ ದೀಕ್ಷ ಬೊಬ್ಬೆ ಹೊಡೆದಿದ್ದು ಸ್ಥಳೀಯರು ಬಂದು ಆತನಿಗೆ ಎರಡು ಗೂಸಾ ಕೊಟ್ಟಿದ್ದಾರೆ.
ಮತ್ತೊಂದೆಡೆ ರಸ್ತೆಯಲ್ಲಿ ಮೂವರು ಪ್ರವಾಸಿಗರು ನಶೆಯಲ್ಲಿ ಹೊಡೆದಾಟ ನಡೆಸಿದ್ದು ಅವರನ್ನ ಸ್ಥಳೀಯರು ತಡೆದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ತುಂಬಾ ತಡವರಿಸಿ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರವಾಸಿಗರಿಗೆ ಪುಕ್ಕಟೆ ಎಚ್ಚರಿಕೆ ನೀಡಿ ಬಂದ ದಾರಿಯಲ್ಲೇ ಹಿಂದಿರುಗಿದ್ದಾರಂತೆ.
ಸ್ಥಳೀಯರಾದ ನಾಗೇಶ್ ಉಚ್ಚಿಲ್ ಅವರು ಮಾತನಾಡಿ ಪ್ರದೇಶದಲ್ಲಿ ನಾಯಿಕೊಡೆಗಳಂತೆ ಅಕ್ರಮ ಗೆಸ್ಟ್ ಹೌಸ್‌ಗಳು ತಲೆ ಎತ್ತಿದ್ದು ಸಂಬಂಧಪಟ್ಟ ಇಲಾಖೆಗಳು ಇದರ ವಿರುದ್ದ ಕ್ರಮ ಜರಗಿಸುತ್ತಿಲ್ಲ. ಇಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಗೆಸ್ಟ್ ಹೌಸ್‌ಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದಲೇ ದಾಖಲೆಯನ್ನು ಪಡೆದಿರುವುದಾಗಿ ನಾಗೇಶ್ ತಿಳಿಸಿದ್ದಾರೆ. ಇಲ್ಲಿನ ಗೆಸ್ಟ್ ಹೌಸ್‌ಗಳಲ್ಲಿ ಮದ್ಯ ಲಭ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿಗೆ ಬಂದ ಪ್ರವಾಸಿಗರು ಈ ರೀತಿ ಹೇಗೆ ನಶೆಯಲ್ಲಿ ತೇಲಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
PublicNext
26/06/2022 03:36 pm