ಮಂಗಳೂರು: ಇತ್ತೀಚೆಗೆ ದ.ಕ.ಜಿಲ್ಲೆಯ ಹಲವು ದೇವಸ್ಥಾನಗಳ ಜಾತ್ರಾಮಹೋತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿಷೇಧದ ಫಲಕ ಭಾರೀ ಸದ್ದು ಮಾಡಿತ್ತು. ಜಾತ್ರೋತ್ಸವಗಳು ಮುಗಿಯುತ್ತಿದ್ದಂತೆ ಈ ವಿಚಾರ ತಣ್ಣಗಾಗಿತ್ತು. ಇದೀಗ ಮತ್ತೆ ದ.ಕ.ಜಿಲ್ಲೆಯ ಬೆಳ್ತಂಗಡಿಯ ಶ್ರೀ ಸೌತಡ್ಕ ದೇವಸ್ಥಾನದಲ್ಲಿ ಹಿಂದೂಯೇತರರ ವಾಹನಗಳಿಗೆ ಪ್ರವೇಶ ನಿರ್ಬಂಧ ವಿಧಿಸಿ ಹಿಂದೂ ಸಂಘಟನೆಗಳು ಫಲಕ ಅಳವಡಿಸಿರುವ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರವೇಶ ದ್ವಾರದ ಬಳಿಯೇ ವಿಶ್ವ ಹಿಂದೂಪರಿಷತ್ ಬಜರಂಗದಳದ ಹೆಸರಿನಲ್ಲಿ ಫಲಕ ಅಳವಡಿಸಲಾಗಿದೆ. ಈ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಮತ್ತು ವಾಹನ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿನ ಮುಸ್ಲಿಂ ಆಟೋ ಚಾಲಕನೋರ್ವನು ಬೆಂಗಳೂರಿನ ಯುವತಿಯೋರ್ವಳನ್ನು ಬಾಡಿಗೆಗೆ ಕರೆತಂದಿದ್ದ. ಈ ಸಂದರ್ಭ ಆಕೆಯ ದೂರವಾಣಿ ಸಂಖ್ಯೆ ಪಡೆದು ಪ್ರೀತಿ - ಪ್ರೇಮವೆಂದು ಲವ್ ಜಿಹಾದ್ ಎಸಗಿದ್ದಾನೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರೋದರಿಂದ ಈ ಫಲಕ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸೌತಡ್ಕ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ ಕ್ಷೇತ್ರವಾಗಿದ್ದು, ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧದ ಫಲಕ ಹಾಕಿಲ್ಲ ಎನ್ನಲಾಗಿದೆ.
Kshetra Samachara
04/06/2022 09:48 am