ಮಂಗಳೂರು: ನಗರದ ಹೊರವಲಯದ ಕಣ್ಣೂರಿನಲ್ಲಿ ನಡೆದಿರುವ SDPI ಜನಾಧಿಕಾರ ಸಮಾವೇಶಕ್ಕೆ ತೆರಳುತ್ತಿದ್ದಾಗ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಕಿಡಿಗೇಡಿ ಯುವಕರ ಮೇಲೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 27 ರಂದು ಕಣ್ಣೂರಿನ ಮೈದಾನದಲ್ಲಿ SDPI ಜನಾಧಿಕಾರ ಸಮಾವೇಶ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಯುವಕರಿಬ್ಬರು ಪಡೀಲ್ ಕಡೆಯಿಂದ ಕೆ.ಟಿ.ಎಂ ಬೈಕ್ ನಲ್ಲಿ ಆಗಮಿಸುತ್ತಿದ್ದರು. ಈ ಸಂದರ್ಭ ಬೈಕ್ ಸವಾರ ಹಾಗೂ ಸಹಸವಾರ, ಅದೇ ರೀತಿ ಮತ್ತೊಂದು ಕಾರಿನಲ್ಲಿದ್ದ ಸವಾರ ಹಾಗೂ ಇತರರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಹಾಗೂ ಪೊಲೀಸ್ ಇಲಾಖೆಯನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ, ''ಪೋಡಾ ಪುಲ್ಲೆ ಪೊಲೀಸೆ". "ನಾಯಿಂಡೆ ಮೋನೆ ಪೊಲೀಸೆ" ಎಂದು ನಿಂದಿಸಿದ್ದಾರೆ.
ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಗನ ಗೌಡ ಎಂಬವರ ಮೈಮೇಲೆ ಹಾಯಿಸುವಂತೆ ಬಂದಿದ್ದಾರೆ. ಅವರು ತಕ್ಷಣ ಪಕ್ಕಕ್ಕೆ ಸರಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ತವ್ಯನಿರತ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಯುಂಟು ಮಾಡಿ, ನಿಂದನೆ ಮಾಡಿರುವ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
29/05/2022 05:16 pm