ಕುಂದಾಪುರ: ಕುಂದಾಪುರದ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಯಾನೆ ಕಟ್ಟೆ ಭೋಜಣ್ಣ (79) ಆತ್ಮಹತ್ಯೆ ಪ್ರಕರಣ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿಯನ್ನು ನಿನ್ನೆ ರಾತ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಚೋದನೆ ಆರೋಪ ಹೊತ್ತಿರುವ ಮತ್ತೋರ್ವ ಆರೋಪಿ ಎಚ್. ಇಸ್ಮಾಯಿಲ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಗಣೇಶ್ ಶೆಟ್ಟಿಯನ್ನು ಜೆಎಂಎಫ್‌ಸಿ ನ್ಯಾಯಾಧೀಶೆ ರೋಹಿಣಿ ಅವರ ನಿವಾಸದಲ್ಲಿ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಬಹುಕೋಟಿ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ಅವರು ಮೇ 26ರ ಬೆಳಗ್ಗೆ ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ತನ್ನ ಪಿಸ್ತೂಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದ ಡೆತ್‌ನೋಟ್‌ನಲ್ಲಿ ಗಣೇಶ್ ಶೆಟ್ಟಿ ಹಾಗೂ ಎಚ್. ಇಸ್ಮಾಯಿಲ್ ಅವರ ಹೆಸರು ಪ್ರಸ್ತಾಪ ಆಗಿತ್ತು. ಗೋಲ್ಡ್ ಜುವೆಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 3.34 ಕೋ.ರೂ. ಮತ್ತು 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಇದರ ಬಡ್ಡಿ, ಅಸಲು ಸೇರಿ ಈಗ 9 ಕೋ.ರೂ. ಆಗಿದ್ದು, ಇದನ್ನು ನೀಡದೇ ಮೋಸ ಮಾಡಿರುವುದಾಗಿ ಬರೆದುಕೊಂಡಿದ್ದರು.
ದೊಡ್ಡ ಮಟ್ಟದಲ್ಲಿ ಉದ್ಯಮಗಳನ್ನು ಹೊಂದಿದ್ದ ಕಟ್ಟೆ ಗೋಪಾಲಕೃಷ್ಣ ಅವರು ಕೊರೊನಾ ನಂತರ ಉದ್ಯಮದಲ್ಲಿ ನಷ್ಟ ಹೊಂದಿದ್ದರು ಎನ್ನಲಾಗಿದೆ.
PublicNext
28/05/2022 07:05 am