ಉಳ್ಳಾಲ: ಐದು ಹಳೆಯ ಪ್ರಕರಣಗಳಲ್ಲಿ ಕೋರ್ಟ್ ಬಂಧನದ ವಾರೆಂಟ್ ನ ನಟೋರಿಯಸ್ ಕ್ರಿಮಿನಲ್ ಓರ್ವನನ್ನ ಉಳ್ಳಾಲ ಪೊಲೀಸರು ಚಿನ್ನಾಭರಣ ಕಳವು ಆರೋಪದಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮದನಿ ನಗರ ಕೆಳಗಿನ ಮಸೀದಿ ಬಳಿಯ ನಿವಾಸಿ ಮಹಮ್ಮದ್ ಕಬೀರ್ ಯಾನೆ ತಸ್ಲಿಂ(25) ಬಂಧಿತ ಆರೋಪಿ.
ಕಳೆದ ವಾರ ಮದನಿ ನಗರದ ಅಬ್ದುಲ್ ರಶೀದ್ ಎಂಬವರ ಮನೆಯ ಹಂಚನ್ನು ಸರಿಸಿ ಕೋಣೆಯ ಒಳನುಗ್ಗಿ ಸುಮಾರು 70 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ನಡೆಸಲಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಮನೆಯ ಮಾಲೀಕ ಅಬ್ದುಲ್ ರಶೀದ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಕಳೆದ ಮೇ 19 ರಂದು ತೊಕ್ಕೊಟ್ಟು ಆಟೋ ರಿಕ್ಷಾ ನಿಲ್ದಾಣದ ಬಳಿ ಉಳ್ಳಾಲ ಠಾಣಾ ಪಿಎಸ್ಐ ಶಿವಕುಮಾರ್ ಖಚಿತ ಮಹಿತಿಯ ಮೇರೆಗೆ ಠಾಣಾ ಸಿಬ್ಬಂದಿಯೊಂದಿಗೆ ಕೋರ್ಟ್ ವಾರೆಂಟ್ ಇರುವ ಹಳೆಯ ಕ್ರಿಮಿನಲ್ ಪ್ರಕರಣದ ಆರೋಪಿ ಮಹಮ್ಮದ್ ಕಬೀರ್ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಕಬೀರ್ನನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಮದನಿನಗರದ ಮನೆಯಲ್ಲಿ ಚಿನ್ನಾಭರಣ ಕಳವು ನಡೆಸಿದ್ದು ಆತನೇ ಎಂದು ತಿಳಿದುಬಂದಿದೆ.
ಬಂಧಿತ ಕಬೀರ್ನಿಂದ ಕಳವುಗೈದ ಚಿನ್ನಾಭರಣಗಳಾದ ಒಂದು ಮಕ್ಕಳ ಚಿನ್ನದ ಸರ,ಒಂದು ಮಕ್ಕಳ ಬ್ರೇಸ್ ಲೇಟ್, ಹಾಗೂ ಮಹಿಳೆಯರು ಧರಿಸುವ ಎರಡು ಚಿನ್ನದ ಉಂಗುರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಆರೋಪಿ ಮಹಮ್ಮದ್ ಕಬೀರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಹದಿನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ಸುಮಾರು ಎರಡು ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದು ಐದು ಪ್ರಕರಣದಲ್ಲಿ ಈತನ ವಿರುದ್ಧ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು.
Kshetra Samachara
21/05/2022 10:24 pm