ಉಡುಪಿ : ಅಪಘಾತದ ಮೂಲಕ ಹಿಂಬದಿ ಸವಾರೆಯ ಸಾವಿಗೆ ಕಾರಣನಾದ ಆರೋಪಿ ಬೈಕ್ ಸವಾರನಿಗೆ ಉಡುಪಿ ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ. ಪ್ರತಾಪ ಸುದರ್ಶನ ಶೆಟ್ಟಿ ಶಿಕ್ಷೆಗೆ ಗುರಿಯಾದ ಆರೋಪಿ.
ಈತ 2017ರ ಅ.21ರಂದು ಸಂಜೆ ಜಯಲಕ್ಷ್ಮೀ ಎಂಬವರನ್ನು ಬೈಕಿನ ಹಿಂಬದಿ ಕೂರಿಸಿಕೊಂಡು, ಹೋಗುತ್ತಿದ್ದು, ಪುತ್ತೂರು ಗ್ರಾಮದ ರೊಬೋಸಾಪ್ಟ್ ಟೆಕ್ನಾಲಜೀಸ್ ಕಂಪನಿಯ ಎದುರು ಚಂದ್ರಾವತಿ ಎಂಬವರ ಸ್ಕೂಟರ್‌ಗೆ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಚಂದ್ರಾವತಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡರು.
ಇದರಿಂದ ಬೈಕ್‌ನ ಸಹ ಸವಾರೆ ಜಯಲಕ್ಷ್ಮೀ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಆರೋಪಿಯು ಅಪಘಾತದ ನಂತರ ಬೈಕನ್ನು ನಿಲ್ಲಿಸದೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ ಸ್ಥಳದಿಂದ ಪರಾರಿಯಾಗಿದ್ದನು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಒಂದನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್‌ಪ್ರಕಾಶ್, ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟು, ಆರೋಪಿಗೆ 2 ವರ್ಷದ ಕಾರಾಗೃಹ ವಾಸ ಶಿಕ್ಷೆ ಹಾಗೂ 11,500ರೂ. ದಂಡ ವಿಧಿಸಿ, ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.
Kshetra Samachara
28/04/2022 11:47 am