ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಆದಿವಾಸಿ ಮಹಿಳೆಗೆ ಹಲ್ಲೆ, ಅರೆಬೆತ್ತಲೆಗೊಳಿಸಿ ವಿಡಿಯೋ ಮಾಡಿದ ದುಷ್ಕರ್ಮಿಗಳ ತಂಡ!

ಬೆಳ್ತಂಗಡಿ: ಸರಕಾರಿ ಜಮೀನಿನಲ್ಲಿ ನಿವೇಶನದ ವಿಚಾರವನ್ನು ಮುಂದಿಟ್ಟುಕೊಂಡು ದುಷ್ಕರ್ಮಿಗಳ ತಂಡವೊಂದು ಆದಿವಾಸಿ ಸಮುದಾಯದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕ ರಸ್ತೆಯಲ್ಲಿ ಆಕೆಯ ಉಟ್ಟ ಬಟ್ಟೆಗಳನ್ನು ಹರಿದು ಹಾಕಿ ಅರೆಬೆತ್ತಲೆಗೊಳಿಸಿ ಕೇಕೆ ಹಾಕಿ ಅದನ್ನು ವಿಡಿಯೋ ಚಿತ್ರೀಕರಣವನ್ನೂ ಮಾಡಿದ ಅಮಾನವೀಯ ಘಟನೆ ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ.

ಅಳಕೆ ನಿವಾಸಿ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರು ಈ ಕೃತ್ಯವನ್ನು ಎಸಗಿದವರು ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಪ್ರಿಲ್ 19ರಂದು ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭ ಜಾಗದ ಬಗ್ಗೆ ಇನ್ನೊಂದು ತಂಡ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದವರು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ.

ಅಧಿಕಾರಿಗಳು ತೆರಳಿದ ಬಳಿಕ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ಮಹಿಳೆಯರ ಮೇಲೆ ಈ ತಂಡ ಎರಗಿದೆ. ಮಹಿಳೆಯರೂ ಇದ್ದ ತಂಡ ಮೊದಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ನೋಡಿ ಅಕ್ಕನ ರಕ್ಷಣೆಗೆ ತೆರಳಿದ ತಂಗಿಯ ಮೇಲೆ ಇವರು ಮುಗಿಬಿದ್ದು ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದು ಹಾಕಿದ್ದಾರೆ. ಅಲ್ಲದೆ ಅನಾಗರಿಕರಂತೆ ಕೇಕೆ ಹಾಕಿ ಅರೆಬೆತ್ತಲೆಯಾಗಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಮನೆಯ ಕಡೆಗೆ ಹೋಗಲೂ ಬಿಡದೆ ಹಲ್ಲೆ ಮಾಡಿದ್ದಾರೆ.

ಸರಕಾರಿ ಜಮೀನಿನ ನಿವೇಶನಕ್ಕೆ ಸಂಬಂಧಿಸಿದಂತೆ ಆದಿವಾಸಿ ಮಹಿಳೆಯ ಮೇಲೆ ದಾಳಿ ನಡೆಸಿ ಅರೆಬೆತ್ತಲೆಗೊಳಿಸಿದ ಕೃತ್ಯ ಅತ್ಯಂತ ಅಮಾನವೀಯ. ಇದರ ನೇತೃತ್ವವನ್ನು ಬಿಜೆಪಿ ಎಸ್ಟಿ ಮೋರ್ಛಾದ ಅಧ್ಯಕ್ಷ ವಹಿಸುವ ಮೂಲಕ ಮಹಿಳೆಯರನ್ನು ಮಾತೆ, ದೇವತೆ ಎನ್ನುವವರ ನಿಜ ಬಣ್ಣ ಬಯಲಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದ ಈ ಅಮಾನವೀಯ ಕೃತ್ಯ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಹಿಳೆಯರನ್ನು ಮಾತೆ, ದೇವತೆ ಎನ್ನುವ ಬಿಜೆಪಿ ಪಕ್ಷದ ಎಸ್ಟಿ ಮೋರ್ಛಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಎಂಬಾತನ ನೇತೃತ್ವದಲ್ಲಿ ಮಹಿಳೆಯನ್ನು ನಡು ರಸ್ತೆಯಲ್ಲಿ ಅರೆಬೆತ್ತಲೆಗೊಳಿಸಿರುವುದು ರಾಮರಾಜ್ಯದ ಪರಿಕಲ್ಪನೆಯೇ? ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಶಾಸಕ ಹರೀಶ್ ಪೂಂಜಾರ ಮೌನ ಮಹಿಳೆಯನ್ನು ನಡು ಬೀದಿಯಲ್ಲಿ ಅರೆಬೆತ್ತಲೆಗೊಳಿಸಿರುವುದಕ್ಕೆ ಸಮ್ಮತಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಘಟನೆಯು ಶಾಸಕರ ಚುನಾವಣಾ ರಾಜಕೀಯದ ಹಿಡನ್ ಅಜೆಂಡಾ ಅಡಗಿದೆ. ತಪ್ಪಿತಸ್ಥ ದುಷ್ಕರ್ಮಿಗಳನ್ನು 24 ಘಂಟೆಗಳಲ್ಲಿ ಬಂಧಿಸದಿದ್ದರೆ ಪೊಲೀಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ.

Icon: ಅಮಾನವೀಯ ಕೃತ್ಯ.!

Edited By : Nagesh Gaonkar
PublicNext

PublicNext

23/04/2022 11:00 pm

Cinque Terre

79.63 K

Cinque Terre

25

ಸಂಬಂಧಿತ ಸುದ್ದಿ