ಮಂಗಳೂರು: ನಗರದ ಅಡ್ಯಾರ್ ಬಳಿ ಭಗ್ನ ಪ್ರೇಮಿಯೋರ್ವನು ಟವರ್ ಏರಿ ಅವಾಂತರ ಸೃಷ್ಟಿಸಿರುವ ಘಟನೆ ಇಂದು ನಡೆದಿದೆ.
ಸ್ಥಳೀಯ ನಿವಾಸಿ ಸುಧೀರ್ ಎಂಬಾತ ಅಡ್ಯಾರ್ ನಲ್ಲಿಯೇ ಬಸ್ ಕ್ಲೀನರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ. ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಈತನನ್ನು ನಿರ್ಲಕ್ಷ್ಯ ವಹಿಸಿದರೂ, ಈತ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಭಗ್ನಪ್ರೇಮಿ ಸುಧೀರ್ ನೀಡುತ್ತಿದ್ದ ಕಿರುಕುಳವನ್ನು ಸಹಿಸದ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದಳು. ಪರಿಣಾಮ ಮನನೊಂದು ಆತ್ಮಹತ್ಯೆ ಮಾಡುವುದಾಗಿ ಸುಧೀರ್ ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭಗ್ನಪ್ರೇಮಿ ಸುಧೀರ್ ನನ್ನು ಟವರ್ ನಿಂದ ಇಳಿಸಲು ಹರಸಾಹಸಪಟ್ಟರೂ ಆತ ಇಳಿದಿರಲಿಲ್ಲ.
ಕೊನೆಗೆ ಯುವತಿಯೇ ಬಂದು ದೂರು ವಾಪಸ್ ತೆಗೆದುಕೊಳ್ಳುವೆ ಎಂದು ಹೇಳಿದ ಬಳಿಕ ಆತ ಟವರ್ ನಿಂದ ಇಳಿದಿದ್ದಾನೆ. ಈ ಮೂಲಕ ಭಗ್ನಪ್ರೇಮಿಯ ಅವಾಂತರವು ಸುಖಾಂತ್ಯಗೊಂಡಿದೆ.
Kshetra Samachara
18/04/2022 03:12 pm