ಕಡಬ: ಕಡಬದಲ್ಲಿ ನಡೆದ ಏಕಹಾಭಜನಾ ಮಹೋತ್ಸವಕ್ಕೆ ನಿಯೋಜನೆ ಕೊಂಡಿದ್ದ ಉಪ್ಪಿನಂಗಡಿ ಠಾಣೆಯ ಪೊಲೀಸರಿಬ್ಬರು ಮದ್ಯದ ಅಮಲಿನಲ್ಲಿ ಪಾನ್ ಅಂಗಡಿ ಮಾಲೀಕನಿಗೆ ಲಾಠಿಯಲ್ಲಿ ಯದ್ವಾತದ್ವಾ ಹೊಡೆದು ಅಂಗಡಿ ಧ್ವಂಸ ಮಾಡಿ ಕರ್ತವ್ಯದ ನಡುವೆಯೇ ಘಟನಾ ಸ್ಥಳದಿಂದ ಪರಾರಿಯಾದ ಘಟನೆ ಎ.8 ರಂದು ಮದ್ಯರಾತ್ರಿ ನಡೆದಿದೆ.
ಕಡಬದಲ್ಲಿ ನಡೆಯುವ ಏಕಹಾಭಜನಾ ಮಹೋತ್ಸವಕ್ಕೆ ಹೆಚ್ಚುವರಿಯಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಯತ್ತ ಬಂದ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿಗಳಾದ ಶಿಶಿಲದ ಮೋಹನ್, ಹಾಗೂ ಎಎಸ್ಐ ಕೋಡಿಂಬಾಳದ ಸೀತಾರಾಮ ಎಂಬವರು ಪಾನ್ ಬೀಡ ಜಗಿದು ಹಣ ನೀಡದೆ ಹೋಗಲು ಮುಂದಾಗಿದ್ದರು. ಆದರೆ ಪಾನ್ ಅಂಗಡಿಯಾತ ಹಣ ನೀಡುವಂತೆ ವಿನಂತಿಸಿದ್ದ. ಇದರಿಂದ ಕೋಪಗೊಂಡ ಪೊಲೀಸ್ ಸಿಬ್ಬಂದಿಗಳು ಪೊಲೀಸರ ಜೊತೆನೇ ದುಡ್ಡು ಕೇಳ್ತೀಯಾ ಅಂತ ಬೈದು ತಮ್ಮ ಕೈಯಲ್ಲಿದ್ದ ಲಾಠಿಯಿಂದ ಯದ್ವತದ್ವಾ ಅಂಗಡಿಯಾತನಿಗೆ ಹೊಡೆದು ಪಾನ್ ಸ್ಟಾಲನ್ನು ಧ್ವಂಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪೊಲೀಸ್ ಸಿಬ್ಬಂದಿಗಳು ದುರ್ವರ್ತನೆ ತೋರಿ ಬಳಿಕ ತಮ್ಮ ಕಾರಿನಲ್ಲಿ ಹೋಗಿ ಕುಳಿತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಸುತ್ತುವರಿದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೋಹನ್ ಎಂಬಾತ ಸ್ಥಳದಿಂದ ಎಸ್ಕೇಪ್ ಆಗಿದ್ದು ಎಎಸ್ಐ ಸೀತಾರಾಮ ಎಂಬವರ ಕಾರಿನ ಸುತ್ತ ಜನ ಜಮಾಯಿಸಿದ್ದಾರೆ. ಪೊಲೀಸರು ಸಂಪೂರ್ಣ ಪಾನಮತ್ತರಾಗಿ ಇರುವುದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಜನರು ಅಮಾಯಕನ ಮೇಲೆ ಲಾಠಿಏಟು ನೀಡಿದನ್ನು ಪ್ರಶ್ನಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಏಟಿಗೆ ಅಸ್ಪಸ್ಥಗೊಂಡ ಪಾನ್ ವ್ಯಾಪಾರಿ ಕೂಡಲೇ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಿನ್ನೆ ಕರ್ತವ್ಯದಲ್ಲಿದ್ದ ಕಡಬ ಎಸ್.ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಆಸ್ಪತ್ರೆಯತ್ತ ಧಾವಿಸಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮುಖಂಡರೊಂದಿಗೆ ಗಂಭೀರ ಮಾತುಕತೆ ನಡೆಸಿದ ಪೊಲೀಸರು ರಾಜಿಯಲ್ಲಿ ಪ್ರಕರಣ ಮುಗಿಸುವ ತೀರ್ಮಾನಕ್ಕೆ ಬಂದಿದ್ದು ಬೀಡ ಸ್ಟಾಲ್ ನಾಶ ಪಡಿಸಿದಕ್ಕೆ ಸುಮಾರು 5 ಸಾವಿರ ರೂ ಮೊತ್ತ ಹಾಗೂ ಕ್ಷಮೆಯಾಚಿಸುವುದಾಗಿ ಹೇಳಿದರು. ಈ ಘಟನೆಯ ಗಂಭೀರತೆ ತಿಳಿದು ನಡುರಾತ್ರಿಯೇ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ರಾತ್ರೋ ರಾತ್ರಿ ಕಡಬ ಠಾಣೆಗೆ ಬಂದು ಮಾಹಿತಿ ಪಡೆದಿದ್ದಾರೆ.
ಇಲಾಖೆಗೆ ಕಪ್ಪು ಚುಕ್ಕೆ ತಂದ ಸಿಬ್ಬಂದಿಯ ನಡೆಗೆ ಗರಂ ಗೊಂಡ ವೃತ್ತ ನಿರೀಕ್ಷಕರು ಎಸ್.ಐ ಅವರಿಗೆ ಕೂಡಲೇ ಈ ಘಟನೆಯ ಬಗ್ಗೆ ವರದಿ ನೀಡುವಂತೆ ಆದೇಶಿಸಿದರು. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು, ಕೂಡಲೇ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವೃತ್ತ ನಿರೀಕ್ಷಕರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
Kshetra Samachara
10/04/2022 10:44 pm