ಮಂಗಳೂರು: ಕುಖ್ಯಾತ ಅಪರಾಧಿಗಳಾದ ಮಂಗಳೂರಿನ ಪಿಂಕಿ ನವಾಝ್ ಹಾಗೂ ಆಕಾಶಭವನ ಶರಣ್ ವಿರುದ್ಧ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಕಿರುವ ಗೂಂಡಾ ಕಾಯ್ದೆಗೆ ರಾಜ್ಯ ಹೈಕೋರ್ಟ್ ಅಸ್ತು ಎಂದಿದೆ. ಸದ್ಯ ಬೆಂಗಳೂರು ಹಾಗೂ ವಿಜಯಪುರದ ಜೈಲಿನಲ್ಲಿರುವ ಇಬ್ಬರೂ ಆರೋಪಿಗಳನ್ನು ಒಂದು ವರ್ಷಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವಂತೆ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.
ಕೊಲೆ, ಕೊಲೆಯತ್ನ, ದರೋಡೆ, ಕಳವು ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಪಿಂಕಿ ನವಾಝ್ ಹಾಗೂ ಆಕಾಶಭವನ ಶರಣ್‌ರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಅಲ್ಲದೆ ಈ ಇಬ್ಬರೂ ಕುಖ್ಯಾತ ಕ್ರಿಮಿನಲ್ ಗಳ ವಿರುದ್ಧ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್, ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್, ಎಸಿಪಿ ಸಿಸಿಆರ್‌ಬಿ ರವೀಶ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ರಾಘವ ಪಡೀಲ್, ಚಂದ್ರಪ್ಪ ಮತ್ತಿತರ ಪೊಲೀಸ್ ಅಧಿಕಾರಿಗಳು ಇವರ ವಿರುದ್ಧ ಗೂಂಡಾ ಕಾಯ್ದೆ ಹಾಕುವುದಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಸಿದ್ದಪಡಿಸಿದ್ದರು. ಈ ಮುಖೇನ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಲೆಂದು ರಾಜ್ಯ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೀಗ ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಅಲ್ಲದೆ ಆರೋಪಿಗಳಿಬ್ಬರ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಪೊಲೀಸ್ ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು 1 ಲಕ್ಷ ರೂ. ಮೊತ್ತದ ಬಹುಮಾನ ಘೋಷಿಸಿದ್ದಾರೆ.
PublicNext
29/03/2022 10:54 pm