ಕುಂದಾಪುರ: ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಾ, ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ ಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಬಂಧಿತ ಆರೋಪಿಯಾಗಿದ್ದಾನೆ.
ಪ್ರದೀಪ್ ಹಾಗೂ ಪ್ರಿಯಾಂಕ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು.ಇವರದ್ದು ಲವ್ ಮ್ಯಾರೇಜ್. ಮದುವೆಯ ಬಳಿಕ ಪ್ರಿಯಾಂಕ ತನ್ನ ಪತಿ ಮನೆಯಲ್ಲೇ ನೆಲೆಸಿದ್ದರು. ಮದುವೆಯಾಗಿ ನಾಲ್ಕೈದು ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ದಿನನಿತ್ಯ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಬಾ ಎಂದು ಚಿತ್ರಹಿಂಸೆ ನೀಡಲಾರಂಭಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಪ್ರದೀಪ್ ತನ್ನ ಪತ್ನಿ ಪ್ರಿಯಾಂಕಾಗೆ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ, ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪತ್ನಿ ಪ್ರಿಯಾಂಕ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸರು ಆರೋಪಿ ಪ್ರದೀಪ್ ನನ್ನು ಬಂಧಿಸಿ ಇದೀಗ ವಿಚಾರಣೆ ನಡೆಸುತ್ತಿದ್ದಾರೆ.
PublicNext
01/03/2022 03:20 pm