ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ನೂರು ರೂಪಾಯಿ ವಿಚಾರಕ್ಕೆ ಗಂಡ, ಹೆಂಡತಿ ಜಗಳ ಹತ್ಯೆಯಲ್ಲಿ ಅಂತ್ಯ: ಆರೋಪಿ ಬಂಧನ

ಬಂಟ್ವಾಳ: ನೂರು ರೂಪಾಯಿ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಉಂಟಾದ ವೈಮನಸ್ಸಿನಿಂದಾಗಿ ತನ್ನ ಭಾವನಿಂದಲೇ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದು, ಆರೋಪಿ ಬಾವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ ಕೇಶವ ಪೂಜಾರಿ(47)ಮೃತಪಟ್ಟವರಾಗಿದ್ದು, ಅವರ ಬಾವ ಮಣಿನಾಲ್ಕೂರು ಗ್ರಾಮದ ಅಶೋಕ್ ಯಾನೆ ಚಂದಪ್ಪ (45) ಪೂಜಾರಿ ಬಂಧಿತ ಆರೋಪಿಯಾಗಿದ್ದಾನೆ. ಕೇಶವ ಪೂಜಾರಿ ಮಂಗಳೂರಿನ ಹೊಟೇಲ್‌ನಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದು, ಕಳೆದ ಜ.31ರಂದು ಮನೆಗೆ ಬಂದ ಅವರು ಸಂಬಳದ ಹಣವನ್ನು ಪತ್ನಿ ಪ್ರೇಮಾ ಅವರಲ್ಲಿ ನೀಡಿದ್ದಾರೆ. ಬಳಿಕ ನೂರು ರೂಪಾಯಿ ಕೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಪ್ರೇಮಾ ಅವರು ಈ ವಿಚಾರವನ್ನು ತನ್ನ ಅಣ್ಣ ಅಶೋಕ್ ಯಾನೆ ಚಂದಪ್ಪ ಪೂಜಾರಿಗೆ ತಿಳಿಸಿದ್ದಾರೆ.

ಮನೆಗೆ ಬಂದ ಅಶೋಕ್ ಯಾನೆ ಚಂದಪ್ಪ ಪೂಜಾರಿ ಕೇಶವ ಪೂಜಾರಿ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡಿದ್ದ ಕೇಶವ ಪೂಜಾರಿಗೆ ವಿಪರೀತ ಎದೆನೋವು ಕಾಣಿಸಿಕೊಂಡಿದೆ. ತತ್‌ಕ್ಷಣ ಅವರನ್ನು ತಾಯಿ ಲೀಲಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಔಷಧಿ ಪಡೆದು, ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕೇಶವ ಪೂಜಾರಿ ಅವರಿಗೆ ಫೆ.8ರಂದು ತೀವ್ರ ಅನಾರೋಗ್ಯ ಕಾಣಿಸಿಕೊಂಡಿದೆ.ಮನೆಮಂದಿ ಅವರನ್ನು ಬಂಟ್ವಾಳ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ನೆರೆಹೊರೆಯವರು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಪುಂಜಾಲಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿ ಶವಪರೀಕ್ಷೆ ಮಾಡಿಸಲು ಸೂಚಿಸಿದ್ದಾರೆ. ಅದರಂತೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಶವಪರೀಕ್ಷೆ ಮಾಡಿಸಿದಾಗ ಹಲ್ಲೆಯಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂಬುವುದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡ ಸಿಐ ಶಿವಕುಮಾರ್ ಮತ್ತು ತಂಡ ಆರೋಪಿಯನ್ನು ಫೆ.21ರಂದು ಮಂಗಳೂರಿನ ಬಜಪೆ ವ್ಯಾಪ್ತಿಯ ಹೊಟೇಲ್‌ನಲ್ಲಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

23/02/2022 08:42 pm

Cinque Terre

16.91 K

Cinque Terre

7

ಸಂಬಂಧಿತ ಸುದ್ದಿ