ಮಂಗಳೂರು: ಮದುವೆ ಸಮಾರಂಭದಲ್ಲಿ ಯುವಕನೋರ್ವ ಯುವತಿಗೆ ಚುಡಾಯಿಸಿದ ಪರಿಣಾಮ ನೆರೆದಿದ್ದ ಯುವಕರ ನಡುವೆ ಹೊಯ್ ಕೈ ನಡೆದ ಘಟನೆ ನಗರ ಹೊರವಲಯದ ತೊಕ್ಕೊಟ್ಟಿನಲ್ಲಿ ನಡೆದಿದೆ.
ಈ ಸಂದರ್ಭ ಜಟಾಪಟಿ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೈದಿದ್ದು, ರೊಚ್ಚಿಗೆದ್ದ ಪೊಲೀಸರು ಹಲ್ಲೆಕೋರರಿಗೆ ಅಟ್ಟಾಡಿಸಿ ಹೊಡೆದಿದ್ದಾರೆ. ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಸಭಾಂಗಣದಲ್ಲಿ ಇಂದು ಮದುವೆ ಸಮಾರಂಭ ನಡೆದಿತ್ತು. ಕೋಟೆಕಾರು ಮಾಡೂರಿನ ವಧು ಮತ್ತು ಕೇರಳದ ಕಾಸರಗೋಡಿನ ವರನಿಗೆ ವಿವಾಹ ನಡೆದಿತ್ತು.
ಸಮಾರಂಭದಲ್ಲಿ ವರನ ಕಡೆಯ ಯುವಕನೊಬ್ಬ ವಧುವಿನ ಕಡೆಯ ಯುವತಿಯ ಹಿಂದೆ ಬಿದ್ದು ಚುಡಾಯಿಸಿದ್ದ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ ಚುಡಾಯಿಸಿದವನಿಗೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪರಸ್ಪರ ಯುವಕರ ಗುಂಪಿನ ನಡುವೆ ಬೀದಿ ಕಾಳಗವೇ ನಡೆದಿದೆ!
ಸ್ಥಳದಲ್ಲಿ ಉಳ್ಳಾಲ ಉರೂಸ್ ಬಂದೋಬಸ್ತ್ ನಲ್ಲಿದ್ದ ಪೊಲೀಸರೋರ್ವರಿಗೆ ಉದ್ರಿಕ್ತರು ಕುತ್ತಿಗೆ ಹಿಚುಕಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರ ಪೊಲೀಸರು ಒಟ್ಟು ಸೇರಿ ಹಲ್ಲೆಕೋರರನ್ನು ಅಟ್ಟಾಡಿಸಿ ಹಿಡಿದು, ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
PublicNext
17/02/2022 09:10 pm