ಮಂಗಳೂರು: ನಗರದಲ್ಲಿ ಮತ್ತೊಂದು ಕೋಟ್ಯಂತರ ರೂ. ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್) ಮಾರಾಟ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಇಂದು ನಗರದ ಜೆಪ್ಪಿನಮೊಗರು ಬಳಿ 2.20 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯೊಂದಿಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಡಗು ಹಾಗೂ ಕೇರಳ ಮೂಲದ ಜಾಬೀರ್ ಎಂ.ಎ.(35), ಆಸೀರ್ ವಿ.ಪಿ.(36), ಶರೀಫ್ ಎನ್.(32), ಶಬಾದ್ ಎಲ್.ಕೆ.(27) ಬಂಧಿತ ಆರೋಪಿಗಳು. ಇವರು ನಗರದ ಜೆಪ್ಪಿನಮೊಗರು ಎಂಬಲ್ಲಿ 2.20 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದಿರುವ ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ಮೊಬೈಲ್ ಫೋನ್ ಗಳ, 1 ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಗಳ ಹಿಂದೆಯಷ್ಟೇ 3.48 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು ಕೋಣಾಜೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಿದ್ದರು.
PublicNext
15/02/2022 10:25 pm