ಸುಳ್ಯ : ಬೆಳ್ಳಿಗೆ ಚಿನ್ನದ ಕೋಟಿಂಗ್ ಮಾಡಿಕೊಡಲು ಜುವೆಲ್ಲರ್ಸ್ ಶಾಪ್ ಗೆ ಕೋಟಿಂಗ್ ಮಾಡಲು ಹೋದ ವ್ಯಕ್ತಿ ಮತ್ತು ಜುವೆಲ್ಲರ್ಸ್ ಶಾಪ್ ನ ಮಾಲಕರ ನಡುವೆ ಪರಸ್ಪರ ಹಲ್ಲೆ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯದಲ್ಲಿ ಜ.23ರಂದು ವರದಿಯಾಗಿದೆ.
ಜಾಲ್ಸೂರಿನ ವಿಮಲೇಶ್ ಜುವೆಲರ್ ಶಾಪ್ ಮಾಲಕ ಗೋಪಾಲ್ ಶೇಟ್ ಎಂಬುವವರು ಸುಳ್ಯದ ರಾಮ ಬಾರ್ ಸಮೀಪದ ಜುವೆಲ್ಲರ್ಸ್ ಅಂಗಡಿಗೆ ಹೋಗಿ ಅಂಗಡಿ ಮಾಲಕ ಉತ್ತಮ್ ಶೇಟ್ ಎಂಬವರಿಗೆ ಬೆಳ್ಳಿಗೆ ಚಿನ್ನದ ಕೋಟಿಂಗ್ ಮಾಡಲು ಕೊಟ್ಟಿದ್ದರೆನ್ನಲಾಗಿದೆ.
ತುರ್ತಾಗಿ ಕೋಟಿಂಗ್ ಕೆಲಸ ಮಾಡಿ ಕೊಡುವ ಮಾತಿಗೆ ಸಂಬಂಧಿಸಿ ಮಾತು ಬೆಳೆದು ಉತ್ತಮ ಶೇಟ್ ಅವರು ಗೋಪಾಲ ಶೇಟ್ ಅವರಿಗೆ ರಾಡ್ ನಿಂದ ಕೈಗೆ ಹೊಡೆದು ಹಲ್ಲೆ ನಡೆಸಿದ್ದರೆನ್ನಲಾಗಿದೆ. ಘಟನೆಯಿಂದ
ಗೋಪಾಲ ಶೇಟ್ ಅವರ ಕೈ ಪ್ರಾಕ್ಚರ್ ಆಗಿದ್ದು, ಕೈ ಬೆರಳು ಹಾಗೂ ತುಟಿಗೆ ಗಾಯವಾಗಿದ್ದು, ಅವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರಸ್ಪರ ಹೊಡೆದಾಡಿಕೊಂಡ ಬಳಿಕ ಅಂಗಡಿ ಮಾಲಕ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಗೋಪಾಲ ಶೇಟ್ ಅವರ ಮೇಲೆ ದೂರು ನೀಡಿರುವುದಾಗಿ ತಿಳಿದುಬಂದಿದೆ. ಆಭರಣದ ಕೋಟಿಂಗ್ ವಿಷಯದಲ್ಲಿ ನಡೆದ ಜಗಳದಲ್ಲಿ ಒಬ್ಬಾತ ಆಸ್ಪತ್ರೆಗೆ, ಮತ್ತೊಬ್ಬ ಪೊಲೀಸ್ ಠಾಣೆಗೆ ಹೋಗುವಂತೆ ಮಾಡಿದೆ.
Kshetra Samachara
23/01/2022 10:58 pm