ಮುಲ್ಕಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ನಿವಾಸಿ ಗಿರೀಶ್ ಮಡಿವಾಳ ಎಂಬಾತನನ್ನು ಸ್ಥಳೀಯ ಬಿಜೆಪಿ ನಾಯಕ ಭುವನಾಭಿರಾಮ ಉಡುಪ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ತೇಜೋವಧೆ ಮೆಸೇಜ್ ಫಾರ್ವರ್ಡ್ ಮಾಡಿದ್ದಾನೆ ಎಂಬ ದೂರಿನಂತೆ ಮುಲ್ಕಿ ಪೊಲೀಸರು ರಾಜಕೀಯ ಪ್ರೇರಿತವಾಗಿ ಬಂದಿಸಿ ದೌರ್ಜನ್ಯ ಎಸಗಿರುವುದು ದುರದೃಷ್ಟಕರವಾಗಿದೆ.
ಅಮಾಯಕ ಯುವಕನ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸಂಜೀವ ಮಡಿವಾಳ ಕಟೀಲು ಆಗ್ರಹಿಸಿದ್ದಾರೆ.
ಅವರು ಕಿನ್ನಿಗೋಳಿ ಅಭಿನಂದನ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅಮಾಯಕ ಗಿರೀಶ್ ಮಡಿವಾಳ ಎಂಬವರ ಮೇಲೆ ದೂರು ದಾಖಲಾಗುತ್ತಿದ್ದಂತೆ ಏಕಾಏಕಿ ಉಪಾಯದಿಂದ ರಾಜಕೀಯ ಪ್ರೇರಿತವಾಗಿ ಮುಲ್ಕಿ ಪೊಲೀಸರು ಬಂಧಿಸಿ ಠಾಣೆಯಲ್ಲಿ ಮೊಬೈಲ್ ಕಸಿದುಕೊಂಡು ಒಳಉಡುಪಿನಲ್ಲಿ ಲಾಕಪ್ ನಲ್ಲಿ ಇರಿಸಿ ಚಿತ್ರಹಿಂಸೆ ನೀಡಿ ದೌರ್ಜನ್ಯ ನಡೆಸಿದ್ದಾರೆ
ಈ ಸಂದರ್ಭ ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ ಯುವ ನಾಯಕ ಮಿಥುನ್ ರೈ ಅಮಾಯಕನನ್ನು ಪೊಲೀಸ್ ದೌರ್ಜನ್ಯದಿಂದ ರಕ್ಷಿಸಿದ್ದಾರೆ ಎಂದರು.
ಅಮಾಯಕನಾದ ಗಿರೀಶ್ ಮಡಿವಾಳನ ವಿರುದ್ಧ ಸುಳ್ಳು ದೂರು ನೀಡಿ ಬಂಧಿಸಲು ಕಾರಣಕರ್ತರಾದ ಬಿಜೆಪಿ ನಾಯಕ ಭುವನಾಭಿರಾಮ ಉಡುಪ ಕೂಡಲೇ ಕ್ಷಮೆ ಕೇಳಬೇಕು ದೌರ್ಜನ್ಯ ನಡೆಸಿದ ಮುಲ್ಕಿ ಪೊಲೀಸರ ವಿರುದ್ಧ ತನಿಖೆ ನಡೆಯಬೇಕು ಇಲ್ಲದಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದ ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧದ ಎದುರು ಮಡಿವಾಳ ಸಮಾಜದಿಂದ ಪೊಲೀಸ್ ದೌರ್ಜನ್ಯ ಹಾಗೂ ಸುಳ್ಳು ದೂರು ನೀಡಿದ ನಾಯಕರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಜೀವ ಮಡಿವಾಳ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಮಡಿವಾಳ ಉಪಸ್ಥಿತರಿದ್ದರು.
Kshetra Samachara
12/01/2022 08:15 pm