ವಿಟ್ಲ: ಮದುವೆ ಸಮಾರಂಭದಲ್ಲಿ ಮದುಮಗನಿಗೆ ಶ್ರೀ ಕೊರಗಜ್ಜನ ವೇಷ ಹಾಕಿ ಕುಣಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದುಷ್ಕರ್ಮಿಗಳು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ.
ಕೊಳ್ನಾಡು ಗ್ರಾಮದ ಅಜೀಜ್ ಎಂಬವರ ಮಗಳ ಮದುವೆ ದಿನ ಈ ಘಟನೆ ನಡೆದಿದೆ. ಕೇರಳದ ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ಅಜೀಜ್ ಪುತ್ರಿಯ ವಿವಾಹ ಮಧ್ಯಾಹ್ನ ಜರುಗಿತ್ತು. ಅದೇ ದಿನ ರಾತ್ರಿ ಸಂಪ್ರದಾಯದಂತೆ ವರ, ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ (ತಾಳ) ಆಗಮಿಸಿದ್ದಾನೆ. ತಡರಾತ್ರಿ ಬಂದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದು, ಈ ಸಂದರ್ಭ ತುಳುನಾಡಿನ ಆರಾಧ್ಯ ದೈವವಾದ ಶ್ರೀ ಕೊರಗಜ್ಜನ ವೇಷ ಭೂಷಣ ಧರಿಸಿ, ತಲೆಗೆ ಅಡಿಕೆ ಹಾಳೆ ಟೋಪಿ ಹಾಕಿ, ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ್ದ.
ಇಂತಹ ಕುಕೃತ್ಯ ಎಸಗಿ ಹಿಂದೂಗಳ ನಂಬಿಕೆ, ಭಾವನೆಗೆ ಧಕ್ಕೆ ತರಲಾಗಿದೆ. ಅಷ್ಟೇ ಅಲ್ಲದೆ, ಕೊರಗ ಸಮುದಾಯವನ್ನೂ ಈ ತಿಳಿಗೇಡಿಗಳು ಅವಮಾನಿಸಿದ್ದಾರೆ ಎಂದು ಸ್ವತ: ಮುಸ್ಲಿಮರೇ ಟೀಕಿಸಿದ್ದು, ಹುಚ್ಚಾಟ ಪ್ರದರ್ಶಿಸಿದ ವರ ಮತ್ತು ಆತನ ಸಂಗಡಿಗರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಎಂಬ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಈ ಘಟನೆ ಖಂಡಿಸುತ್ತೇವೆ. ಈ ಕಿಡಿಗೇಡಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.
PublicNext
07/01/2022 03:30 pm