ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ಎನ್ಐಟಿಕೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನು ಆತ್ಮಹತ್ಯೆಗೈದಿರುವ ಘಟನೆ ಇಂದು ನಡೆದಿದೆ.
ಬಿಹಾರ ರಾಜ್ಯದ ಪಾಟ್ನಾ ಮೂಲದ ಎನ್ಐಟಿಕೆಯಲ್ಲಿ ದ್ವಿತೀಯ ವರುಷದ ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸೌರವ್(19) ಆತ್ಮಹತ್ಯೆಗೈದ ವಿದ್ಯಾರ್ಥಿ. ಹಾಸ್ಟೆಲ್ ನಲ್ಲಿದ್ದ ಸೌರವ್ ಇಂದು ಬೆಳಗ್ಗೆ ಏಳದಿರುವುದನ್ನು ಕಂಡು ಉಳಿದ ವಿದ್ಯಾರ್ಥಿಗಳು ಕಿಟಕಿಯಲ್ಲಿ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಆತ ಬರೆದಿಟ್ಟ ಡೆತ್ ನೋಟ್ ಲಭ್ಯವಾಗಿದೆ. ಡೆತ್ ನೋಟ್ ನಲ್ಲಿ 'ತನ್ನ ತಲೆಯಲ್ಲಿ ಯಾವುದೋ ರಾಸಾಯನಿಕ ರೀತಿಯ ಪ್ರತಿಕ್ರಿಯೆ ನೀಡುವಂತಾಗಿದೆ. ಸಾಲ ಮಾಡಿ ಶಿಕ್ಷಣ ಪಡೆಯುತ್ತಿರುವ ನನಗೆ ವ್ಯಾಸಂಗ ಮುಗಿದ ಬಳಿಕ ಉದ್ಯೋಗ ಸಿಗುತ್ತೋ ಇಲ್ಲವೋ ತಿಳಿದಿಲ್ಲ ಎಂದು ಹೇಳಿ, ತನ್ನ ಸಾವಿಗೆ ತಾನೇ ಕಾರಣ' ಎಂದು ತಂದೆಗೆ ಪತ್ರ ಬರೆದಿದ್ದಾನೆ.
ಮೃತನ ಪೋಷಕರೂ ಬಡವರಾಗಿದ್ದು, ಪಾಟ್ನಾಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗದೆ ಮಂಗಳೂರಿನಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಹೇಳಿದ್ದರು. ಆದರೆ ಎನ್ಐಟಿಕೆ ಶಿಕ್ಷಣ ಸಂಸ್ಥೆ, ಪ್ರಾಧ್ಯಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಣಕಾಸಿನ ವ್ಯವಸ್ಥೆ ಮಾಡಿ ಆತನ ಪೋಷಕರನ್ನು ಕರೆಸಿಕೊಂಡು, ಮೃತದೇಹವನ್ನು ಪಾಟ್ನಾಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಆತನ ಆತ್ಮಹತ್ಯೆ ಬಗ್ಗೆ ಪೋಷಕರು ಯಾವುದೇ ಅನುಮಾನವನ್ನು ವ್ಯಕ್ತಪಡಿಸಲಿಲ್ಲವೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.z
PublicNext
26/12/2021 03:55 pm