ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು, ಲಕ್ಷಾಂತರ ಮೌಲ್ಯದ ನಗ, ನಗದು ದೋಚಲಾಗಿದೆ.
ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಸ್ಥಳೀಯ ಸಂಘಟನೆಗಳಿಂದ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ "ಶಿವದೂತೆ ಗುಳಿಗೆ" ನಾಟಕ ನಡೆಯುವ ಸಂದರ್ಭ ಇಳಿಸಂಜೆ 7ರಿಂದ ನಡುರಾತ್ರಿ 12ರ ಮಧ್ಯೆ ದೇವಸ್ಥಾನ ಪರಿಸರದ 3 ಮನೆಗಳಲ್ಲಿ ಕಳ್ಳತನ ನಡೆದಿದೆ.
ದಯಾನಂದ ಕೋಟ್ಯಾನ್ ಎಂಬವರ ಮನೆ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು, ಕಪಾಟು ಒಡೆದು 7 ಸಾವಿರ ರೂ. ಕಳವು ಮಾಡಿದ್ದಾರೆ.
ಬಳಿಕ ಕಳ್ಳರು ತೋಕೂರು ಮಿಲ್ ಬಳಿಯ ರಾಮಚಂದ್ರ ಶೆಟ್ಟಿ ಅವರ ಮನೆ ಬೀಗ ಒಡೆದು, ಕಪಾಟು ಜಾಲಾಡಿ 5 ಪವನ್ ಚಿನ್ನ, 500 ರೂ. ದೋಚಿದ್ದಾರೆ.
ಅನಂತರ ಕಳ್ಳರು ದೇವಸ್ಥಾನ ಸಿಬ್ಬಂದಿ ಸಂತೋಷ್ ದೇವಾಡಿಗ ಅವರ ಮನೆ ಹೆಂಚು ತೆಗೆದು ಒಳ ನುಗ್ಗಿ ಕಪಾಟನ್ನು ಜಾಲಾಡಿದ್ದು, ಬಳಿಕ ದೇವರ ದೀಪದ ಬಳಿಯಿದ್ದ ಒಂದೂವರೆ ಸಾವಿರ ರೂ. ಕಳವು ಮಾಡಿದ್ದಾರೆ.
ಮಂಗಳೂರು ಡಿಸಿಪಿ ಕ್ರೈಮ್ ದಿನೇಶ್ ಕುಮಾರ್, ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ.
Kshetra Samachara
06/12/2021 01:44 pm