ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಾಲಕಿ ಅಪಹರಿಸಿ ಅತ್ಯಾಚಾರ; ಅಪರಾಧಿಗೆ 7 ವರ್ಷ ಜೈಲು

ಮಂಗಳೂರು: ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಆರೋಪ‌ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್​ಟಿಎಸ್‌ಸಿ-1 ನ್ಯಾಯಾಲಯ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ತಾಲೂಕಿನ ಕೋಟೆಕಾರು ಗ್ರಾಮದ ದೇರಳಕಟ್ಟೆ ನಿವಾಸಿ ಇರ್ಫಾನ್ (28) ಶಿಕ್ಷೆಗೊಳಗಾದ ಅಪರಾಧಿ. ಅಪಹರಣ ಕೃತ್ಯಕ್ಕೆ 3 ವರ್ಷ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 15 ದಿನ ಹೆಚ್ಚುವರಿ ಸಜೆ. ತಡೆದು ನಿಲ್ಲಿಸಿದ ಕೃತ್ಯಕ್ಕೆ 5 ತಿಂಗಳು ಸಜೆ ಮತ್ತು 1 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಮತ್ತೆ 15 ದಿನ ಸಜೆ. ಹತ್ಯೆ ಬೆದರಿಕೆಯೊಡ್ಡಿರುವುದಕ್ಕೆ ಒಂದು ವರ್ಷ ಸಜೆ ಮತ್ತು 2 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿ ಎರಡು ತಿಂಗಳು ಸಜೆ. ಅಪ್ರಾಪ್ತೆ ಮೇಲಿನ ಅತ್ಯಾಚಾರಕ್ಕೆ ಪೋಕ್ಸೊ ಕಾಯ್ದೆಯಡಿ 7 ವರ್ಷ ಸಜೆ ಮತ್ತು 15 ಸಾವಿರ ರೂ. ದಂಡ, ಇದನ್ನು ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಎರಡು ತಿಂಗಳ ಸಜೆ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಶಿಕ್ಷೆಯನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬೇಕು.

ಅಪರಾಧಿ ಇರ್ಫಾನ್ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು, ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದ. 2014ರಲ್ಲಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಹೋಗುತ್ತಿದ್ದ ವೇಳೆ ನಾಟೆಕಲ್‌ ಎಂಬಲ್ಲಿ ತಡೆದು ನಿಲ್ಲಿಸಿ ಕಾರಿನಲ್ಲಿ ಅಪಹರಿಸಿ, ಚಿಕ್ಕಮಗಳೂರಿನ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದ.

ಅಪ್ರಾಪ್ತೆಯ ನಾಪತ್ತೆ ಬಗ್ಗೆ ಹೆತ್ತವರು ಉಳ್ಳಾಲ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಇರ್ಫಾನ್ ಬಂಧನಕ್ಕೊಳಗಾಗಿದ್ದ‌. ಆಗಿನ ಉಳ್ಳಾಲ ಇನ್‌ಸ್ಪೆಕ್ಟರ್ ಸವಿತ್ರ ತೇಜ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣ ಕೈಗೆತ್ತಿಗೊಂಡ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್​ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ವಿಚಾರಣೆ ನಡೆಸಿ ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

30/11/2021 03:56 pm

Cinque Terre

10.64 K

Cinque Terre

0

ಸಂಬಂಧಿತ ಸುದ್ದಿ