ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮನೆ ಕಿಟಕಿ ಒಡೆದು ನುಗ್ಗಿದ ಖದೀಮರು; ನಗ-ನಗದು ಕಳವು

ಮುಲ್ಕಿ: ಇಲ್ಲಿನ ವಿಜಯ ಕಾಲೇಜು ವಿದ್ಯಾರ್ಥಿನಿಲಯ ಬಳಿಯ ಮನೆ ಕಿಟಕಿ ಒಡೆದು ನುಗ್ಗಿದ ಕಳ್ಳರು ನಗ-ನಗದು ದೋಚಿದ್ದಾರೆ.

ಈ ಮನೆಯ ಮಾಲೀಕ ದಿವಾಕರ ಕಾಮತ್ ವಾರದ ಹಿಂದೆ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸಂಬಂಧಿಕ ಮುಲ್ಕಿ ನಪಂ ಸದಸ್ಯ ಬಾಲಚಂದ್ರ ಕಾಮತ್ ಮನೆ ಕಡೆ ಬಂದು ಹೋಗುತ್ತಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅವರು ಬಂದು ನೋಡುವಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳರು ಮನೆ ಎದುರು ಭಾಗದ ಬೀಗ ಒಡೆಯಲು ವಿಫಲ ಯತ್ನ ನಡೆಸಿ, ಹಿಂಭಾಗದ ಕಿಟಕಿಯ ಕಬ್ಬಿಣದ ಸರಳು ಒಡೆದು ಒಳ ಬಂದು, ಒಳಗಿನ ಬಾಗಿಲು ತೆಗೆಯಲಾರದೆ ಮನೆಯ ಇನ್ನೊಂದು ಬದಿಯ ಕಿಟಕಿ ಒಡೆದು ಒಳಬಂದು ಟಿವಿ ಸ್ಟ್ಯಾಂಡ್ ನ ಡ್ರಾವರನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಬಳಿಕ ಕೋಣೆಗಳಲ್ಲಿರುವ ಮೂರು ಕಪಾಟನ್ನು ಒಡೆದು ಜಾಲಾಡಿದ್ದಾರೆ.

ಮಾಳಿಗೆಯ ಹಳೆಕಾಲದ ಭಾರಿ ಗಾತ್ರದ ಬಾಗಿಲಿನ ಬೀಗ ಒಡೆದು ಕೋಣೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮನೆ ಹೊರ ಬದಿಯ ಶೌಚಾಲಯದ ಬೀಗವನ್ನೂ ಒಡೆದು ಜಾಲಾಡಿದ್ದಾರೆ.

ಸ್ಥಳದಲ್ಲಿ ಕಳ್ಳತನಕ್ಕೆ ಬಳಸಿದ ಕತ್ತಿ ಮತ್ತಿತರ ಸಾಧನ ಪತ್ತೆಯಾಗಿದೆ. ಮುಲ್ಕಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಕಳ್ಳತನ ನಡೆದ ಪ್ರಮಾಣದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ತಿಂಗಳ ಹಿಂದೆ ಮುಲ್ಕಿ ಠಾಣೆ ಸಮೀಪದ ಪಂಚಮಹಲ್ ರಸ್ತೆ ಮನೆಯೊಂದರಲ್ಲಿ ಇದೇ ರೀತಿ ಕಳ್ಳತನ ನಡೆದಿತ್ತು. ಪರಿಸರದಲ್ಲಿ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಕೂಡಲೇ ಪೊಲೀಸರು ಜಾಗೃತರಾಗಿ ಕಳ್ಳರನ್ನು ಪತ್ತೆ ಹಚ್ಚುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Edited By : Shivu K
Kshetra Samachara

Kshetra Samachara

16/11/2021 01:48 pm

Cinque Terre

13.68 K

Cinque Terre

0

ಸಂಬಂಧಿತ ಸುದ್ದಿ