ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಂಬಾಳ ಪರಿಸರದಲ್ಲಿ ಅಪರಿಚಿತ ವ್ಯಕ್ತಿಯೋರ್ವ ತಾಮ್ರದ ಪಾತ್ರೆ,ಚಿನ್ನದ ಸರ ಹೊಳಪು ಮಾಡಿ ಕೊಡುತ್ತೇನೆ ಎಂದು ತಿರುಗಾಡುತ್ತಿದ್ದು,ಈತನ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಕಡಬ ಪೊಲೀಸ್ ಠಾಣೆಗೆ ತಿಳಿಸುವಂತೆ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇಂದು ಮದ್ಯಾಹ್ನದ ಹೊತ್ತಿಗೆ ಕಡಬ ತಾಲೂಕಿನ ಕೋಡಿಂಬಾಳ ಪರಿಸರದಲ್ಲಿ ತಾಮ್ರದ ಪಾತ್ರೆಗಳು ದೇವರ ದೀಪ ಹಾಗೂ ಚಿನ್ನಾಭರಣಗಳಿಗೆ ಹೊಳಪು ಮಾಡಿಕೊಡುತ್ತೇನೆಂದು ಅಪರಿಚಿತ ವ್ಯಕ್ತಿಯೋರ್ವ ಮನೆ ಮನೆಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ . ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಕಡಬ ಪೊಲೀಸರು ತಿಳಿಸಿದ್ದಾರೆ. ಹೀಗೆ ಮನೆಗಳಿಗೆ ತೆರಳುತ್ತಿರುವ ವ್ಯಕ್ತಿಯು ಕೋಡಿಂಬಾಳ ಗ್ರಾಮದ ಮನೆಯೊಂದಕ್ಕೆ ತೆರಳಿ ಮಹಿಳೆಯರಲ್ಲಿ ಮೊದಲು ತಾಮ್ರದ ಪಾತ್ರ ಇದ್ದರೆ ನಾನು ಅದನ್ನು ಹೊಳಪು ಮಾಡಿಕೊಡುತ್ತೇನೆಂದು ಹೇಳಿದ್ದಾನೆ.ನಂತರದಲ್ಲಿ ಈತ ಮೊದಲು ಒಂದು ತಾಮ್ರದ ದೇವರ ದೀಪವನ್ನು ಪಡೆದು ಅದಕ್ಕೆ ಯಾವುದೋ ಒಂದಿಷ್ಟು ಮಿಶ್ರಣವನ್ನು ಬಳಸಿ ಹೊಳಪು ಮೂಡಿಸಿದ್ದಾನೆ. ನಂತರದಲ್ಲಿ ಈತನು ಇದೇ ರೀತಿ ಚಿನ್ನಾಭರಣಗಳನ್ನು ಕೂಡ ನೀಡುವುದಾದರೆ ತಾನು ಹೊಳಪು ಮಾಡಿಕೊಡುತ್ತೇನೆಂದು ಮನೆಯವರಿಗೆ ಹೇಳಿದ್ದಾನೆ.ಇದರಿಂದ ಅನುಮಾನಗೊಂಡ ಮನೆಯವರು ಈ ಮಿಶ್ರಣವನ್ನು ನಮಗೆ ನೀಡಿದರೆ ಸಾಕು ನಾವೇ ಹೊಳಪು ಮಾಡುತ್ತೇವೆ ಎಂದು ಹೇಳಿದ್ದಾರೆ.ಮನೆಯವರು ಈ ತರಹ ಹೇಳಿದಾಗ ನನ್ನಲ್ಲಿ ಕೇವಲ ಕಂಪನಿ ಪ್ರಚಾರಕ್ಕಾಗಿ 2 ಪ್ಯಾಕೆಟ್ ಮಿಶ್ರಣ ಮಾತ್ರ ಇರುವುದು, ಮಾರಾಟಕ್ಕೆ ಇಲ್ಲ ಎಂದಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಮನೆಯವರು ಈತನ ಬ್ಯಾಗನ್ನು ಪರಿಶೀಲನೆ ಮಾಡಿದಾಗ ಈತನ ಬ್ಯಾಗಿನಲ್ಲಿ ಬಾಟಲ್ ಗಳಲ್ಲಿ ಕೆಲವು ಬಣ್ಣ ಬಣ್ಣದ ರಾಸಾಯನಿಕಗಳು ಜೊತೆಗೆ ಒಂದೆರಡು ಟವೆಲ್ ಗಳು ಕಂಡುಬಂದಿದೆ.
ಬ್ಯಾಗಿನ ಪರಿಶೀಲನೆಯಿಂದ ಹಾಗೂ ಮನೆಯವರ ಪ್ರಶ್ನೆಗಳಿಗೆ ಮುಂದೆ ಉತ್ತರಿಸಲಾಗದೆ ಈತನು ತಕ್ಷಣವೇ ಅಲ್ಲಿಂದ ಕಾಲುಕೀಳುವ ಪ್ರಯತ್ನ ಮಾಡಿದ್ದಾನೆ. ಆದರೆ ಮತ್ತೆ ಮನೆಯವರು ಈತನನ್ನು ತಡೆದು ಇನ್ನಷ್ಟು ವಿಚಾರಿಸಲು ಪ್ರಯತ್ನ ಪಟ್ಟಾಗ ತುರಾತುರಿಯಲ್ಲಿ ಪರಾರಿಯಾಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ. ಈ ಬಗ್ಗೆ ಈಗಾಗಲೇ ಕಡಬ ಠಾಣೆಗೆ ಮಾಹಿತಿ ನೀಡಲಾಗಿದ್ದು ಸಾರ್ವಜನಿಕರು ಈತನ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮತ್ತು ಈತನನ್ನು ಎಲ್ಲಾದರೂ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಠಾಣೆಗೆ ತಿಳಿಸುವಂತೆ ಕಡಬ ಪೋಲಿಸರು ತಿಳಿಸಿದ್ದಾರೆ.
Kshetra Samachara
21/09/2021 10:15 am