ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 7ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 3 ವರ್ಷ ಜೈಲು

ಉಡುಪಿ: ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ 3 ವರ್ಷ ಜೈಲು ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಜಡ್ಕಲ್ ಮೂಲದ ಪ್ರಮೋದ್ (26) ಶಿಕ್ಷೆಗೆ ಗುರಿಯಾದ ಅಪರಾಧಿ. ಈ ತೀರ್ಪನ್ನು ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ನೀಡಿದ್ದಾರೆ.

ಏನಿದು ಪ್ರಕರಣ?:

2016 ಜನವರಿ ತಿಂಗಳಿನಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಕೂಲಿ ಕೆಲಸಗಾರನಾಗಿದ್ದ ಪ್ರಮೋದ್, ಬಾಲಕಿ ಹಾಗೂ ಆಕೆ ಸಹೋದರ ಮನೆಯಲ್ಲಿರುವಾಗ ಅಕ್ರಮ ಪ್ರವೇಶ‌ ಮಾಡಿದ್ದ. ಸಂತ್ರಸ್ತೆಯ ಸಹೋದರ ಮನೆಯಿಂದ ಹೊರಗಡೆ ಹೋದಾಗ ಪ್ರಮೋದ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಮುಂದಾಗಿದ್ದ. ಬಾಲಕಿ ಕೂಗಿಕೊಂಡಾಗ ಆಕೆ ತಾಯಿ ಹಾಗೂ ಸಹೋದರ ಬರುವುದನ್ನು ಗಮನಿಸಿದ ಆತ ಬಾಲಕಿ ಹಾಗೂ ಕುಟುಂಬಿಕರಿಗೆ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದ.

ಈ ಬಗ್ಗೆ‌ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ತದನಂತರ ಈ ಪ್ರಕರಣ ಅಂದು ಕುಂದಾಪುರದಲ್ಲಿದ್ದ ಮಹಿಳಾ ಠಾಣೆಗೆ ವರ್ಗಾವಣೆಯಾಗಿದ್ದು, ಅಂದಿನ ಮಹಿಳಾ ಠಾಣೆ ಪಿಎಸ್ಐ ಸುಜಾತಾ ಸಾಲ್ಯಾನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 17 ಸಾಕ್ಷಿದಾರರಲ್ಲಿ 10 ಮಂದಿ ಸಾಕ್ಷಿ ವಿಚಾರಣೆ ನಡೆಸಿದ್ದು ಪ್ರಮುಖವಾಗಿ ಸಂತ್ರಸ್ತ ಬಾಲಕಿ ಹಾಗೂ ಆಕೆ ಸಹೋದರ ನುಡಿದ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿದ್ದು ಆರೋಪಿ ಪ್ರಮೋದ್ ಕುಕೃತ್ಯ ನಡೆಸಿರುವುದು ಸಾಬೀತಾಗಿದೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಕ್ಕೆ ಪೋಕ್ಸೋ ಕಾಯ್ದೆಯಡಿ 3 ವರ್ಷ ಕಠಿಣ ಸಜೆ, 10 ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 1 ವರ್ಷ ಸಜೆ, ಅಕ್ರಮ ಪ್ರವೇಶ (ಐಪಿಸಿ ಸೆಕ್ಷನ್ 448), ಅಕ್ರಮ ತಡೆಗೆ (ಐಪಿಸಿ 342) ತಲಾ 6 ತಿಂಗಳಿನಂತೆ 1 ವರ್ಷ ಸಜೆ, 1 ಸಾವಿರ ದಂಡ ತಪ್ಪಿದಲ್ಲಿ 2 ತಿಂಗಳು ಜೈಲು, ಕೊಲೆ ಬೆದರಿಕೆ (ಐಪಿಸಿ ಕಲಂ 506) 1 ವರ್ಷ ಜೈಲು, 1500 ರೂ ದಂಡ ತಪ್ಪಿದಲ್ಲಿ 6 ತಿಂಗಳು ಸಜೆ. ಒಟ್ಟು 12,500 ರೂ. ದಂಡದ ಮೊತ್ತದಲ್ಲಿ 7,500 ರೂ. ಸರಕಾರಕ್ಕೆ ಹಾಗೂ 5 ಸಾವಿರ ಮೊತ್ತವನ್ನು ಬಾಲಕಿಗೆ ನೀಡಲು ಮತ್ತು ಸರಕಾರದಿಂದ ನೊಂದ ಬಾಲಕಿಗೆ 25 ಸಾವಿರ ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Edited By : Vijay Kumar
Kshetra Samachara

Kshetra Samachara

09/09/2021 01:04 pm

Cinque Terre

9.93 K

Cinque Terre

3

ಸಂಬಂಧಿತ ಸುದ್ದಿ