ವರದಿ: ರಹೀಂ ಉಜಿರೆ
ಉಡುಪಿ: ಸೈಬರ್ ಅಪರಾಧಗಳು, ದಂಧೆಗಳು ಹೆಚ್ಚುತ್ತಲೇ ಇವೆ: ಎಲ್ಲೋ ಕುಳಿತು ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡುವುದೂ ಅಲ್ಲಲ್ಲಿ ನಡೆಯುತ್ತಿರುತ್ತವೆ.ಆದರೆ ಇದೊಂದು ಹೊಸ ಪ್ರಕರಣ: ವ್ಯಕ್ತಿಯೊಬ್ಬರ ಫಿಕ್ಸ್ ಡ್ ಡಿಪಾಸಿಟನ್ನೇ ಅನಾಮತ್ತಾಗಿ ಲಪಟಾಯಿಸಲಾಗಿದೆ.ಈ ಪ್ರಕರಣದಲ್ಲಿ ಎಸ್ ಬಿಐ ಬ್ಯಾಂಕ್ ನ ಬೇಜವಾಬ್ದಾರಿ ಮತ್ತು ಸೇವಾ ನ್ಯೂನತೆಯೂ ಸಾಬೀತಾಗಿದ್ದು ಗ್ರಾಹಕರ ನ್ಯಾಯಾಲಯ ಕಸ್ಟಮರ್ ಗೆ ಪೂರ್ತಿ ಹಣ ಪಾವತಿಸುವಂತೆ ತೀರ್ಪನ್ನೂ ನೀಡಿದೆ.
ಇವರು ಹರೀಶ ಗುಡಿಗಾರ್... ಉಡುಪಿ ಜಿಲ್ಲೆಯ ಉಪ್ಪೂರಿನವರು. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ಮಲ್ಲೇಶ್ವರಂನ ಸ್ಟೇಟ್ ಬ್ಯಾಂಕಿನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿದ್ದರು.ಬೆಂಗಳೂರು ತೊರೆದ ಬಳಿಕ ,ಉಡುಪಿಯ ಸಂತೆಕಟ್ಟೆಯ ಎಸ್ ಬಿಐ ಬ್ರಾಂಚಿಗೆ ಅಕೌಂಟ್ ವರ್ಗಾವವಣೆ ಮಾಡಿದ್ದರು.ತನ್ನ ದುಡಿಮೆಯ ಐದು ಲಕ್ಷ ರೂ.ಫಿಕ್ಸ್ ಡ್ ಡಿಪಾಸಿಟ್ ಇಟ್ಟರು.ಕೆಲ ದಿನಗಳ ಬಳಿಕ ಮೊಬೈಲ್ ಗೆ ಮೆಸೇಜ್ ಬರತೊಡಗಿದವು; ನೋಡಿದರೆ ಹರೀಶ್ ಅವರ ಫಿಕ್ಸ್ ಡ್ ಡೆಪಾಸಿಟ್ ನಲ್ಲಿದ್ದ ಹಣವೇ ಮಾಯವಾಗಿದ್ದವು!
ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ನವರು ಗ್ರಾಹಕರ ನೆರವಿಗೆ ಬರಬೇಕು.ದುರದೃಷ್ಟವಶಾತ್ ಬ್ಯಾಂಕ್ ನವರು ನೆರವಿಗೆ ಬರಲಿಲ್ಲ.ಹರೀಶ್ ತಮ್ಮ ಐದು ಲಕ್ಷ ಕ್ಕೂ ಹೆಚ್ಚಿನ ಹಣ ಕಳೆದುಕೊಂಡು ಹೈರಾಣಾದರು.ಪೊಲೀಸ್ ದೂರು ಕೊಟ್ಟರು.ಬ್ಯಾಂಕ್ ಮ್ಯಾನೇಜರ್ ಗೆ ದುಂಬಾಲು ಬಿದ್ದರು.ಬ್ಯಾಂಕಲ್ಲೂ ಸಮರ್ಪಕ ಉತ್ತರ ಬಾರದೇ ಇದ್ದ ಕಾರಣ ,ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು.ಎಲ್ಲ ತನಿಖೆ ನಂತರ ಹರೀಶ್ ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ನೀಡಬೇಕು ಎಂದು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಹರಿಶ್ ಅವರು ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿದ್ದರೂ ಬ್ಯಾಂಕ್ ನವರು ಹಣ ನೀಡಿಲ್ಲ.ಹೀಗಾಗಿ ನ್ಯಾಯಕ್ಕಾಗಿ ಹರೀಶ್ ರವೀಂದ್ರನಾಥ್ ಶಾನುಭಾಗ್ ಮೊರೆ ಹೋಗಿದ್ದಾರೆ.ಮುಂದೇನಾಗುತ್ತೋ ಕಾದು ನೋಡಬೇಕಿದೆ.
Kshetra Samachara
26/08/2021 05:18 pm