ಮಂಗಳೂರು: ನಗರ ಹೊರವಲಯದ ಉಳ್ಳಾಲದಲ್ಲಿ ಉದ್ಯಮಿ ಬಿ.ಎಂ. ಭಾಷಾ ಅವರ ಮನೆಯ ಮುಂದೆ ಅಕ್ರಮ ಕೂಟ ಸೇರಿಕೊಂಡಿದ್ದಲ್ಲದೆ ಮನೆಗೆ ಅಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ಮತ್ತಿತರರ ಮೇಲೆ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಉಳ್ಳಾಲ ಮೇಲಂಗಡಿಯ ಅಬೂಬಕರ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶರಣ್ ಪಂಪ್‌ವೆಲ್ ನೇತೃತ್ವದ ಬಜರಂಗದಳ ಕಾರ್ಯಕರ್ತರು ಆ.11ರಂದು ಉದ್ಯಮಿ ಬಿಎಂ ಭಾಷಾರ ಮನೆಯ ಮುಂದೆ ಅಕ್ರಮ ಕೂಟ ಸೇರಿಕೊಂಡು ಒಂದು ಧರ್ಮವನ್ನು ಹೀಯಾಳಿಸಿ ಪ್ರಚೋದನಕಾರಿ ಘೋಷಣೆ ಕೂಗಿ ಮನೆಗೆ ನುಗ್ಗಲು ಯತ್ನಿಸಿದ್ದಾರೆ.
ಪೊಲೀಸರು ಸಕಾಲದಲ್ಲಿ ಸ್ಥಳಕ್ಕೆ ಆಗಮಿಸದೇ ಇದ್ದಿದ್ದರೆ ಶರಣ್ ಪಂಪ್‌ವೆಲ್ ನೇತೃತ್ವದ ಗುಂಪು ಭಾಷಾರ ಮನೆಯೊಳಗೆ ಪ್ರವೇಶಿಸಿ ದಾಂಧಲೆ ನಡೆಸುವ ಸಾಧ್ಯತೆ ಇತ್ತು. ಶಾಂತಿಯುತವಾಗಿದ್ದ ಉಳ್ಳಾಲ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸಿದ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಶರಣ್ ಪಂಪ್‌ವೆಲ್ ಮತ್ತಿತರ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅಬೂಬಕ್ಕರ್ ಆಗ್ರಹಿಸಿದ್ದಾರೆ.
Kshetra Samachara
20/08/2021 11:59 am