ಬಜಪೆ: 2011ರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಬಳಿಕ ಸುದೀರ್ಘ ಕಾಲದ ವರೆಗೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡದ ಬಜಪೆ ಪೊಲೀಸರು ಬಂಧಿಸಿದ್ದಾರೆ.
ಬಜಪೆ ಸಮೀಪದ ಸುಂಕದಕಟ್ಟೆಯ ನಿವಾಸಿ ಮನೋಜ್ ಬಿ ಶೆಟ್ಟಿ ಬಂಧಿತ ಆರೋಪಿ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರು ನೀರುಡೆಯ ನಿವಾಸಿಯಾದ ಅಪ್ರಾಪ್ತೆಯು 2011ರ ಜೂ.24 ರಂದು ಸಿದ್ದಾರ್ಥ ನಗರದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಮನೋಜ್ ಶೆಟ್ಟಿ ಮತ್ತು ಆತನ ಗೆಳೆಯ ದಿನೇಶ್ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಆಟೋ ರಿಕ್ಷಾದಲ್ಲಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೆ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ಬಗ್ಗೆ ತನಿಖೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಈ ಹಿಂದಿನ ಎಸಿಪಿ ಪುಟ್ಟ ಮಾದಯ್ಯ ಅವರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ನಂತರ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿ ಮನೋಜ್ ಬಿ ಶೆಟ್ಟಿ ವಿಚಾರಣೆಯ ಸಮಯ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ವಿಚಾರಣೆ ನಡೆಸಿದ ನ್ಯಾಯಾಲಯವು ದಿನೇಶ್ ಅಮೀನ್ ಎಂಬಾತನಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನೋಜ್ ಬಿ ಶೆಟ್ಟಿ ಎಂಬಾತನು ವಿಚಾರಣೆಗೆ ಹಾಜರಾಗದೆ ಇರುವುದರಿಂದ ಆತನ ವಿರುದ್ಧ LPC ವಾರಂಟ್ ಹೊರಡಿಸಿತ್ತು.
ಆರೋಪಿ ಮನೋಜ್ ಶೆಟ್ಟಿಯು ಸುಮಾರು 10 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಮತ್ತು ಮೇಲಂತಬೆಟ್ಟು ಎಂಬಲ್ಲಿ ತನ್ನ ಹೆಸರು ಮೋಹನ್ ಎಂಬುದಾಗಿ ಬದಲಾಯಿಸಿಕೊಂಡು ವಾಸ ಮಾಡಿಕೊಂಡಿದ್ದ. ಆರೋಪಿಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರು ಆರೋಪಿಯನ್ನು ಇಂದು (ಮಂಗಳವಾರ) ಬಂಧಿಸಿದ್ದಾರೆ.
ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ಈ ತಂಡ ಕಳೆದ ಎರಡು ತಿಂಗಳಲ್ಲಿ ಐದಕ್ಕೂ ಹೆಚ್ಚು ಹಳೆಯ ಕೇಸುಗಳನ್ನು ಪತ್ತೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ರವರ ಮಾರ್ಗದರ್ಶನದಂತೆ, ಡಿಸಿಪಿ (ಕಾ&ಸು) ಹರಿರಾಮ್ ಶಂಕರ್, ಡಿಸಿಪಿ (ಅ & ಸಂ) ದಿನೇಶ್ ಕುಮಾರ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ರವರ ನಿರ್ದೇಶನದಂತೆ, ಬಜಪೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ನಡೆಸಿದ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಪಿ.ಎಸ್.ಐ ಪೂವಪ್ಪ ,ಅಪರಾಧ ಪತ್ತೆ ವಿಭಾಗದ ಎ.ಎಸ್.ಐ ರಾಮ ಪೂಜಾರಿ, ಸಿಬ್ಬಂದಿಯವರಾದ ರಶೀದ ಶೇಖ ಮತ್ತು ಸಿದ್ದಲಿಂಗಯ್ಯ ಹಿರೇಮಠ ಅವರು ಪಾಲ್ಗೊಂಡಿದ್ದರು.
Kshetra Samachara
17/08/2021 06:49 pm