ಸುಳ್ಯ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ.
ಮೆಲ್ಕಾರ್ ನಿವಾಸಿ ಅಮಿತ್ ಎಂಬವರ ಪತ್ನಿ ಸಂಗೀತಾ(30) ಮತ್ತು ಆಕೆಯ ಮಗು ನಾಲ್ಕು ವರ್ಷದ ಅಭಿಮನ್ಯು ಮೃತ ದುರ್ದೈವಿಗಳು. ಸಂಗೀತಾ ತಮ್ಮ ತವರು ಮನೆ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದ ಮಾಪಲಕಜೆಗೆ ಬಂದಿದ್ದರು. ನಾಳೆ ಮೆಲ್ಕಾರ್‌ಗೆ ಹೋಗುವವರಿದ್ದರು. ಪಕ್ಕದ ನೆಂಟರೋರ್ವರ ಮನೆಗೆ ಹೋಗುವಾಗ ಮಗು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ಮಗು ಕೆರೆಗೆ ಬಿದ್ದಿದ್ದನ್ನು ನೋಡಿದ ತಾಯಿ ಸಂಗೀತಾ ಅವರು ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ್ದಾರೆ. ಆದರೆ ಈಜುಲು ಬಾರದ ಸಂಗೀತಾ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತನ್ನ ಪ್ರಾಣವನ್ನೂ ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಳ್ಯ ಅಗ್ನಿ ಶಾಮಕ ದಳದ ನೇತೃತ್ವದಲ್ಲಿ ಸಂಗೀತಾ ಅವರ ಮೃತದೇಹ ಮೇಲೆತ್ತಲಾಗಿದ್ದು, ಮಗುವಿನ ಮೃತದೇಹವನ್ನು ಕೆರೆಯಿಂದ ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ಸ್ಥಳಕ್ಕೆ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/08/2021 09:07 pm