ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಶ್ಚಿತಾರ್ಥವಾಗಿದ್ದ ಯುವಕನ ಹತ್ಯೆ ಮಾಡಿದ ಆರೋಪ ಸಾಬೀತು: 6 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

ಮಂಗಳೂರು: ಮದುವೆ ನಿಶ್ಚಿತಾರ್ಥವಾಗಿದ್ದ ಯುವಕನನ್ನು ಹತ್ಯೆ ಮಾಡಿರುವ ಆರೋಪ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ‌ಆರು ಮಂದಿ‌ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1.38 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ‌.

ಬೆಳ್ತಂಗಡಿ ತಾಲೂಕಿನ ನಾವಾರ ನಿವಾಸಿ ಆನಂದ ನಾಯ್ಕ ಎಂಬಾತನಿಗೆ ಮದುವೆಯಾಗಿ ಮಕ್ಕಳಿದ್ದರೂ, ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿಗೆ ಮನೆಯವರು ದಿಡುಪೆ ನಿವಾಸಿ ಸುರೇಶ್ ನಾಯ್ಕ ಎಂಬಾತನೊಂದಿಗೆ ಮದುವೆ ನಿಶ್ಚಯ ಮಾಡಿ, ನಿಶ್ಚಿತಾರ್ಥವನ್ನೂ ಮಾಡಿದ್ದಾರೆ. ಆದರೆ ಯುವತಿಯನ್ನು ಪಡೆಯಲೇ ಬೇಕೆಂಬ ಉದ್ದೇಶದಿಂದ ಆರೋಪಿ ಆನಂದ ನಾಯ್ಕ 2017ರ ಜುಲೈ 29ರಂದು ಸುರೇಶ ನಾಯ್ಕನನ್ನು ಉಪಾಯವಾಗಿ ಉಜಿರೆಗೆ ಬರುವಂತೆ ಮಾಡಿದ್ದಾನೆ. ಅಲ್ಲಿ ಆನಂದ ನಾಯ್ಕ ಪ್ರವೀಣ್ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಎಂಬವರೊಂದಿಗೆ ಸುರೇಶ್ ನಾಯ್ಕನನ್ನು ಕಾರಿನಲ್ಲಿ‌ ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತಿಗೆ ಹಗ್ಗ ಬಿಗಿದು ಕೊಲೆಗೈದಿದ್ದಾರೆ‌.

ಬಳಿಕ ಮೃತದೇಹವನ್ನು ಯಾರೂ ಗುರುತು ಹಿಡಿಯದಂತೆ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ. ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿ ಆರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿರುವ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಆರು ಮಂದಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ‌. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1.38 ಲಕ್ಷ ರೂ. ದಂಡ ವಿಧಿಸಿ ದಂಡದ ಮೊತ್ತದಲ್ಲಿ 1 ಲಕ್ಷ ರೂ. ಹಣವನ್ನು ಮೃತರ ತಾಯಿಗೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ ಹೆಚ್ಚುವರಿ ಗರಿಷ್ಠ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/07/2021 08:40 pm

Cinque Terre

17.55 K

Cinque Terre

0

ಸಂಬಂಧಿತ ಸುದ್ದಿ